ಬೇಟೆಗೆ ತೆರಳುತ್ತಿದ್ದ ಮೂವರ ಬಂಧನ ಏಳು ಮಂದಿ ಪರಾರಿ
ಮೈಸೂರು

ಬೇಟೆಗೆ ತೆರಳುತ್ತಿದ್ದ ಮೂವರ ಬಂಧನ ಏಳು ಮಂದಿ ಪರಾರಿ

September 26, 2018

ಹುಣಸೂರು: ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋಗುತ್ತಿದ್ದ ಮೂವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.

ತಾಲೂಕಿನ ಹನಗೂಡು ಹೋಬಳಿ ಸಿಂಡೆನಹಳ್ಳಿ, ಚಿಕ್ಕೆಗೌಡನಕೊಪ್ಪಲು, ಹೊನ್ನೆನಹಳ್ಳಿ, ಕೊಳುವಿ ಗ್ರಾಮಗಳಿಗೆ ಸೇರಿದ ಸುಮಾರು ಹತ್ತು ಜನರ ತಂಡವೊಂದು ಪ್ರಾಣಿಗಳ ಬೇಟೆಗಾಗಿ ಮಾರಕಾಸ್ತ್ರಗಳೊಂದಿಗೆ ತೆರಳುವಾಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ವಲಯದ ಸಣ್ಣಗದ್ದೆ ಗಸ್ತಿನ ಮೆಟ್ಲು ಹೊಲ ಅರಣ್ಯದಲ್ಲಿ ಗಸ್ತಿನಲ್ಲಿದ್ದ ವೀರನಹೊಸಳ್ಳಿ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಗುಂಪನ್ನು ಹಿಡಿಯಲೆತ್ನಿಸಿದಾಗ ಮೂವರು ಅರೋಪಿಗಳು ಸಿಕ್ಕಿ ಬಿದ್ದು, ಉಳಿದ ಏಳು ಮಂದಿ ಪರಾರಿಯಾಗಿದ್ದಾರೆ.

ಸಿಂಡೆನಹಳ್ಳಿ ಗ್ರಾಮದ ಸುಜೇಂದ್ರ(38), ಜಯರಾಮೇಗೌಡ(40) ಹಾಗೂ ಶಿವಣ್ಣೆಗೌಡ(50) ಬಂಧಿತರು. ಚಿಕ್ಕೆಗೌಡನಕೊಪ್ಪಲು ಗ್ರಾಮದ ಸಣ್ಣಪುಟ್ಟೆಗೌಡರ ಮಗ ನಿಂಗೆಗೌಡ, ಶಿಂಡೆನಹಳ್ಳಿ ಗ್ರಾಮದ ನಿಂಗೆಗೌಡರ ಮಗ ಶ್ರೀಕಾಂತ, ನಾಗಾರಾಜುರವರ ಮಗ ಮಂಜುನಾಥ, ತಿಮ್ಮೆಗೌಡರ ಮಗ ಶೀನೇಗೌಡ, ಹೊನ್ನೆನಹಳ್ಳಿ ಗ್ರಾಮದ ಅಣ್ಣೇಗೌಡರ ಮಗ ವೆಂಕಟೇಶ, ಕೊಳುವಿಗೆ ಹಾಡಿಯ ಗುಂಡಾ, ಹೊಸಹಳ್ಳಿ ಕರಿಯರವರ ಮಗ ಚಿಕ್ಕಣ್ಣ ಅರಣ್ಯದೊಳಗೆ ನಾಪತ್ತೆಯಾಗಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಮೇಲ್ಕಂಡ ಅರಣ್ಯ ಪ್ರದೇಶದಲ್ಲಿ ಕತ್ತಲಿನ ವೇಳೆ ಕಾಡು ಪ್ರಾಣಿಗಳು ಹತ್ಯೆಯಾಗುತ್ತಿವೆ. ನಿಗಾ ವಹಿಸಿ ಎಂದು ಸೂಚಿಸಿದ ಮೇರೆಗೆ ನಿನ್ನೆ ರಾತ್ರಿ ಅರಣ್ಯ ಸಿಬ್ಬಂದಿ ತಂಡ ಗಸ್ತು ಮಾಡುವಾಗ ಈ ತಂಡ ಸಿಕ್ಕಿ ಬಿದ್ದಿದ್ದಾರೆ. ಅರೋಪಿಗಳಿಂದ ಕಾಡ ತೂಸು, ಮಚ್ಚು, ಚಾಕು, ಚೂರಿ, ಕೋವಿ, ಪ್ಲಾಸ್ಟಿಕ್ ಚೀಲಗಳು, ಹೆಡ್ ಲೈಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಅರಣ್ಯ ಕಾಯಿದೆ 1972ರ ಅಧಿ ನಿಯಮ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಹಳೆ ಅರೋಪಿಗಳು: ಅರೋಪಿಗಳ ಪೈಕಿ ಸುಜೇಂದ್ರ, ವೆಂಕಟೇಶ,ಹಾಗೂ ಶಿವಣ್ಣೆಗೌಡನ ಮೇಲೆ 2012-13 ರಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಹಾಗೂ ಕರ್ತವ್ಯನಿರತ ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ದೌರ್ಜನ್ಯ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಅರ್‍ಎಫ್‍ಒಗಳಾದ ಸುರೇಂದ್ರ, ಮಧುಸೂದನ್, ಡಿಅರ್‍ಎಫ್‍ಒಗಳಾದ ವೀರಭದ್ರಯ್ಯ, ರತ್ನಾಕರ, ಚಂದ್ರೇಶ್, ಅರಣ್ಯ ರಕ್ಷಕರಾದ ಗೋಪಾಲ, ಅನಂದ, ರಾಜಶೇಖರ್, ಜೀಪ್ ಚಾಲಕ ರಾಜು ಭಾಗವಹಿಸಿದರು.

Translate »