ಸ್ವಾರ್ಥ ರಾಜಕಾರಣಿಗಳಿಂದ ರಾಜ್ಯ ಪ್ರತ್ಯೇಕತೆಯ ಕೂಗು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ
ಮೈಸೂರು

ಸ್ವಾರ್ಥ ರಾಜಕಾರಣಿಗಳಿಂದ ರಾಜ್ಯ ಪ್ರತ್ಯೇಕತೆಯ ಕೂಗು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

July 30, 2018

ಮೈಸೂರು:  ಸ್ವಾರ್ಥ ರಾಜಕಾರಣ ಮಾಡುತ್ತಿರುವವರು ರಾಜ್ಯವನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸುತ್ತಿದ್ದು, ವಾಸ್ತವವಾಗಿ ಇರುವುದೊಂದೇ ಕರ್ನಾಟಕ, ಅದು ಅಖಂಡ ಕರ್ನಾಟಕ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ವಾಸ್ತವವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ವಿಂಗಡಿಸುವುದೇ ತಪ್ಪು. ನಮ್ಮದು ಅಖಂಡ ಕರ್ನಾಟಕ. ಇದೀಗ ಉತ್ತರ ಕರ್ನಾಟಕ ಎಂದು ಪ್ರತ್ಯೇಕ ರಾಜ್ಯದ ಕೂಗಿಗೆ ಉತ್ತೇಜನ ನೀಡುತ್ತಿರುವವರು ಸ್ವಾರ್ಥ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಸ್ವಾರ್ಥಿಗಳು (ಬಿಜೆಪಿ) ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿದ್ದಾರೆ? ಉಮೇಶ್ ಕತ್ತಿ, ಶ್ರೀರಾಮುಲು ಏನು ಮಾಡಿದ್ದಾರೆ? ಎಂದು ಕಿಡಿಕಾರಿದ ಅವರು, ಉತ್ತರ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು ಎಂಬುದನ್ನು ಒಪ್ಪಿಕೊಳ್ಳೊಣ. ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬುದು ಮೂರ್ಖತನ ಎಂದು ಕಿಡಿಕಾರಿದರು.

ಈ ರೀತಿ ಪ್ರತ್ಯೇಕತೆ ಬಗ್ಗೆ ಮಾತನಾಡುವವರಿಗೆ ಏಕೀಕರಣದ ಮಹತ್ವ ಗೊತ್ತಿಲ್ಲ. ಭಾಷಾವಾರು ಪ್ರಾಂತ್ಯದ ಹಿನ್ನೆಲೆ ತಿಳಿದಿಲ್ಲ. ಕೇವಲ ಸ್ವಾರ್ಥ ರಾಜಕಾರಣ ಮಾಡುವ ದುರುದ್ದೇಶದಿಂದ ಹೀಗೆಲ್ಲಾ ಮಾತನಾಡುತ್ತಾರೆ. ಉತ್ತರ ಕರ್ನಾಟಕ ವ್ಯಾಪ್ತಿಯ ಹೈದರಬಾದ್-ಕರ್ನಾಟಕ ಭಾಗಕ್ಕೆ ಸಂವಿಧಾನದ 371 (ಜೆ) ಕಲಂ ಜಾರಿ ಗೊಳಿಸಿದ್ದು ನಮ್ಮ ಸರ್ಕಾರ. ಇದರಿಂದ ಈ ಭಾಗಕ್ಕೆ ಪ್ರತಿ ವರ್ಷ ಒಂದೂವರೆ ಸಾವಿರ ಕೋಟಿ ರೂ. ವಿಶೇಷ ಅನುದಾನ ದೊರೆಯುವಂತಾಗಿದೆ ಎಂದರು.

ಡಾ.ನಂಜುಂಡಪ್ಪ ವರದಿ ಪ್ರಕಾರ ಹೆಚ್ಚು ಹಿಂದುಳಿದ ತಾಲೂಕುಗಳು ಉತ್ತರ ಕರ್ನಾಟಕದ ಭಾಗದಲ್ಲಿವೆ. ಜೊತೆಗೆ ದಕ್ಷಿಣ ಕರ್ನಾಟಕದ ಚಾಮರಾಜನಗರ ಹಾಗೂ ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲೂ ಹಿಂದುಳಿದ ತಾಲೂಕುಗಳು ಇರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಜ್ಯದ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.

Translate »