ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ಮನ್ನಿಸಲಿಲ್ಲವೇಕೆ?
ಮೈಸೂರು

ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ಮನ್ನಿಸಲಿಲ್ಲವೇಕೆ?

June 13, 2018

ವರುಣಾ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರದ ನುಡಿ

ಮೈಸೂರು: ದೇಶದ ಯಾವ ರಾಜ್ಯದಲ್ಲೂ ಇಲ್ಲದ `ಅನ್ನಭಾಗ್ಯ’ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿ, ನನ್ನ ಆಡಳಿತಾ ವಧಿಯಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲದಂತೆ, ಭ್ರಷ್ಟಾಚಾರ, ಹಗರಣಗಳಿಲ್ಲದೇ ಆಡಳಿತ ನಡೆಸಿದ್ದೇವೆ. ರಾಜ್ಯದ ಜನರು ಆಶೀರ್ವಾದ ಮಾಡೇ ಮಾಡುತ್ತಾರೆಂಬ ವಿಶ್ವಾಸವಿತ್ತು. ಆದರೆ ಇಷ್ಟೆಲ್ಲಾ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರೂ ರಾಜ್ಯದ ಜನತೆ ಮನ್ನಿಸಲಿಲ್ಲವೇಕೆ?

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೇಸರದ ನುಡಿ ಇದು. ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಗೆಲುವಿಗೆ ಸಂಬಂಧಿಸಿದಂತೆ ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇ ಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡುತ್ತಾ ಈ ರೀತಿ ಬೇಸರ ವ್ಯಕ್ತ ಪಡಿಸಿದರು. ಹಿಂದೆ ಯಾವ ಸರ್ಕಾರವೂ ಮಾಡದಿರುವಷ್ಟು ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ವಿನೂತನ, ಕ್ರಾಂತಿ ಕಾರಕ ಕಾನೂನು ತಂದು ಅವಕಾಶ ವಂಚಿತ ರಿಗೆ ನ್ಯಾಯ ದೊರಕಿಸುವ ಕೆಲಸವನ್ನು ನಾವು ಮಾಡಿದ್ದೆವು. ಹಸಿವು ಮುಕ್ತ ಕರ್ನಾ ಟಕದ ಉದ್ದೇಶದೊಂದಿಗೆ ರಾಜ್ಯದ 6.5 ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ರಿಗೆ ಅನ್ನಭಾಗ್ಯದ ಮೂಲಕ ಪ್ರತಿಯೊಬ್ಬ ರಿಗೂ ತಲಾ 7 ಕೆಜಿ ಅಕ್ಕಿಯನ್ನು ಉಚಿತ ವಾಗಿ ನೀಡಿದ್ದೇನೆ.

ಇಂತಹ ಜನಪರ ಕಾರ್ಯಕ್ರಮ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂದರು.

ನನ್ನ ಕಾರ್ಯಕ್ರಮಗಳು ಜಾತಿಗೆ ಸೀಮಿತವಲ್ಲ: ನಾವೆಲ್ಲಾ ಮನುಷ್ಯತ್ವ ಸಂಬಂಧ ಮತ್ತು ಮಾನವೀಯತೆ ಯಲ್ಲಿ ನಂಬಿಕೆ ಇಟ್ಟುಕೊಂಡವರು. ಉಚಿತ ಅಕ್ಕಿ, ಶೂ, ಸೈಕಲ್, ಹಾಲು, ರೈತರಿಗೆ ಬಡ್ಡಿರಹಿತ ಸಾಲ, 8,165 ಕೋಟಿ ಸಾಲಮನ್ನಾ ಮಾಡಿದ್ದೇನೆ. ಇವೆಲ್ಲವೂ ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡಿದ್ದಲ್ಲ. ಇದರ ಫಲ ಇಂದು ರಾಜ್ಯದ ಎಲ್ಲಾ ಜಾತಿ, ವರ್ಗ, ಧರ್ಮದವರಿಗೂ ಸಿಗುತ್ತಿದೆ. ನಮ್ಮ ಕಾರ್ಯಕರ್ತರು ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ಇವೆಲ್ಲವನ್ನು ತಿಳಿಸಬೇಕು. ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ನಮ್ಮನ್ನು ಮನ್ನಿಸಲಿಲ್ಲವೇಕೇ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ಬೇಸರದಿಂದ ನುಡಿದ ಸಿದ್ದರಾಮಯ್ಯ, ಆದರೂ ಬಡವರಿಗೆ, ದಲಿತರಿಗೆ, ರೈತರಿಗೆ ನ್ಯಾಯ ಕೊಟ್ಟ ತೃಪ್ತಿ ನನಗಿದೆ ಎಂದರು.
ಅನ್ನಭಾಗ್ಯ ಯೋಜನೆ ಬಗ್ಗೆ ಅಪಪ್ರಚಾರ ಮಾಡುವ ಬಿಜೆಪಿಯವರೇ ಅಡಳಿತದಲ್ಲಿರುವ ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ, ಗೋವಾ, ಛತ್ತೀಸ್‍ಘಡ, ಉತ್ತರಪ್ರದೇಶ, ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿ ಈ ಯೋಜನೆಯನ್ನು ಬಿಜೆಪಿಯವರು ಏಕೆ ಮಾಡಲಾಗಿಲ್ಲ? ಎಂದು ಪ್ರಶ್ನಿಸಿದರೆ ಇದಕ್ಕೆ ಅವರಿಂದ ಉತ್ತರವಿಲ್ಲ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ನ್ಯಾಯದ ಹೆಸರೇಳುವ ಬಿಜೆಪಿಯವರು ಮನ್‍ಕಿ ಬಾತ್, ಸಬ್‍ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುತ್ತಾ ಜನರಿಗೆ ಬರೀ ಸುಳ್ಳು ಹೇಳುವ ಢೋಂಗಿತನ ಅವರದ್ದು. ಇದನ್ನು ಎಲ್ಲಿಯವರೆಗೆ ಜನರು ಅರ್ಥ ಮಾಡಿಕೊಳ್ಳುವು ದಿಲ್ಲವೋ ಅಲ್ಲಿಯವರೆಗೆ ಢೋಂಗಿಗಳೇ ಆಳುತ್ತಾರೆ ಜೋಪಾನವಾಗಿರಿ ಎಂದು ಜನರಿಗೆ ಸಲಹೆ ನೀಡಿದರು.

ಕೋಮುವಾದಿಗಳ ಕೈಗೆ ಆಡಳಿತ ಸಿಗದಿರಲು ಸಮ್ಮಿಶ್ರ ಸರ್ಕಾರ ರಚನೆ: ರಾಜ್ಯದಲ್ಲಿ ಕಾಂಗ್ರೆಸ್‍ಗೆ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಸಿಗಲಿಲ್ಲ. ಆದರೆ ಶೇಕಡಾವಾರು ಮತದಾನದಲ್ಲಿ ಕಾಂಗ್ರೆಸ್‍ಗೆ ಅತಿ ಹೆಚ್ಚು ಅಂದರೆ ಶೇ.38ರಷ್ಟು ಮತಗಳು ದೊರಕಿವೆ. ಬಿಜೆಪಿಗೆ ಹೆಚ್ಚು ಸ್ಥಾನಗಳಿದ್ದರೂ ಶೇ.36ರಷ್ಟು ಮಾತ್ರ ಮತಗಳು ಸಿಕ್ಕಿವೆ. ಜೆಡಿಎಸ್‍ಗೆ ಶೇ.18 ಮತಗಳು ದೊರೆತಿವೆ.
ನಮ್ಮ ಸರ್ಕಾರದಲ್ಲಿ 5 ವರ್ಷ ಯಾವುದೇ ಕಪ್ಪು ಚುಕ್ಕೆ, ಭ್ರಷ್ಟಾಚಾರ, ಹಗರಣಗಳಿಲ್ಲದೇ ಆಡಳಿತ ನಡೆಸಿದ್ದೇವೆ. ಕರ್ನಾಟಕದ ಜನರ ಆಶೀರ್ವಾದ ಮಾಡೇ ಮಾಡುತ್ತಾರೆಂಬ ವಿಶ್ವಾಸವಿತ್ತು. ಹಿಂದೆ ಯಾವ ಸರ್ಕಾರವೂ ಮಾಡದಿರುವಷ್ಟು ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ವಿನೂತನ, ಕ್ರಾಂತಿಕಾರಕ ಕಾನೂನು ತಂದು ಅವಕಾಶ ವಂಚಿತರಿಗೆ ನ್ಯಾಯ ದೊರಕಿಸುವ ಕೆಲಸವನ್ನು ನಾನು ಮಾಡ್ಡಿದ್ದೇನೆ. ಹಸಿವು ಮುಕ್ತ ಕರ್ನಾಟಕ ಉದ್ದೇಶ ದೊಂದಿಗೆ ರಾಜ್ಯದ 6.5 ಕೋಟಿ ಜನರಲ್ಲಿ 4 ಕೋಟಿ ಜನರಿಗೆ ಪ್ರತಿಯೊಬ್ಬರಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದೇನೆ. ಇಂತಹ ಯೋಜನೆ ದೇಶದ ಯಾವ ರಾಜ್ಯದಲ್ಲಿಯೂ ಇಲ್ಲ ಎಂದರು. ನಾನು ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ಅನುಭವದ ಆಧಾರದ ಮೇಲೆ. ನಾನು ಬಾಲಕನಾಗಿದ್ದಾಗ ಅನೇಕ ಜನರು ಅನ್ನಕ್ಕಾಗಿ ಒದ್ದಾಡುತ್ತಿದ್ದುದನ್ನು ನೋಡಿದೆ. ನಾನು ಮುಖ್ಯಮಂತ್ರಿ ಯಾಗುತ್ತಿದ್ದಂತೆ ಈ ಬಗ್ಗೆ ತೀರ್ಮಾನ ಮಾಡಿ ಯಾರೂ ಯಾರಿಗೂ ಕೈ ಒಡ್ಡಿ ಬೇಡಬಾರದು ಎಂದು ನಿರ್ಧರಿಸಿ ಅನ್ನಭಾಗ್ಯ ಜಾರಿಗೆ ತಂದೆ. ಇಂದು ಎಲ್ಲಿಯೂ ಬಡ ವರು ಭಿಕ್ಷೆ ಎತ್ತುತ್ತಿಲ್ಲ. ಹಸಿದು ಮಲಗುತ್ತಿಲ್ಲ. ಇದು ನನಗೆ ತೃಪ್ತಿ ನೀಡಿದೆ ಎಂದು ಹೇಳಿದರು.

ಸೋತಿದ್ದೇನೆಂದು ಓಡಿ ಹೊಗಲ್ಲ: ನಾನು ಸೋತಾ ಗಲೂ ಕುಗ್ಗಿಲ್ಲ, ಗೆದ್ದಾಗಲೂ ಬೀಗಿಲ್ಲ. ಅಧಿಕಾರ ಇದ್ದಾ ಗಲೂ ಉಬ್ಬಿಲ್ಲ, ಅಧಿಕಾರ ಇಲ್ಲದಿದ್ದರೂ ಕುಗ್ಗಿಲ್ಲ. ನಾನು ಸೋತಿದ್ದೇನೆ ಎಂದು ಓಡಿ ಹೊಗಲ್ಲ. ಆದರೆ ನಮ್ಮ ಹಿತೈಷಿಗಳಿಗೆ ಬೆಂಬಲವಾಗಿ ನಾನು ಇದ್ದೇ ಇರುತ್ತೇನೆ. ರಾಜಕೀಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇ ಡ್ಕರ್, ಮಾಜಿ ಪ್ರಧಾನಿ ಇಂದಿರಾಗಾಂಧಿ ಅಂಥ ವರನ್ನೇ ಸೋಲಿಸಿಬಿಟ್ಟರು. ಯಾವಾಗಲೂ ಒಳ್ಳೆಯ ವರಿಗೇ ಕಷ್ಟ ಬರೋದು ಜಾಸ್ತಿ. ಆ ಕಷ್ಟ ಎದುರಿಸುವ ಶಕ್ತಿ ಕೊಡುವವರೇ ಜನರು. ಜನರು ಕೊಟ್ಟ ತೀರ್ಪಿಗೆ ತಲೆ ಬಾಗಿ ಸ್ವೀಕಾರ ಮಾಡುತ್ತೇನೆ. ಇದೇ ಪ್ರಜಾ ಪ್ರಭುತ್ವದ ಸೊಗಸು ಎಂದರು. ಟೀಕೆಗಳಿಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ಇಡೀ ರಾಜ್ಯವೇ ನಮ್ಮ ಕುಟುಂಬ. ಮುಂದಿನ 5 ವರ್ಷ ನನಗೆ ಮತ್ತು ಡಾ.ಯತೀಂದ್ರರ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದ್ದೀರಿ. ಅದನ್ನು ಸಮರ್ಪಕವಾಗಿ ನಿಭಾಯಿಸುವುದಾಗಿ ಹೇಳಿದರು.

ಕೋಮುವಾದಿ ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಏಕೈಕ ಕಾರಣಕ್ಕಾಗಿ ನಾವು ಕಾಂಗ್ರೆಸ್‍ನವರು 78 ಶಾಸಕರಿದ್ದರೂ ಕಡಿಮೆ ಸಂಖ್ಯೆಯ ಜೆಡಿಎಸ್ ಜೊತೆಗೆ ಕೂಡಿ ಸಮ್ಮಿಶ್ರ ಸಕಾರ ಮಾಡಿದ್ದೇವೆ. ನಾವು ಮಾಡಿದ ಕಾರ್ಯಕ್ರಮಗಳನ್ನೆಲ್ಲವನ್ನೂ ಸಮ್ಮಿಶ್ರ ಸರ್ಕಾರ ಮುಂದುವರಿಸುತ್ತದೆ. ಇವೆಲ್ಲವನ್ನೂ ನೋಡಿಕೊಳ್ಳಲೆಂದೇ ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿ ಕುಳಿತಿದ್ದೇನೆ ಎಂದರು.

ಸಭೆಯಲ್ಲಿ ಗೊಂದಲ: ಕೃತಜ್ಞತಾ ಸಮಾರಂಭದ ಆರಂಭದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಕಾರ್ಯಕರ್ತರನ್ನು ನಿಯಂತ್ರಿಸಲು ಕಾಂಗ್ರೆಸ್ ಮುಖಂಡರು ಹರಸಾಹಸ ಪಡುವಂತಾಯಿತು. ವೇದಿಕೆ ಮೇಲಿಂದ ಸಿದ್ದರಾಮಯ್ಯ ಮನವಿ ಮಾಡಿದರೂ ಕೇಳದ ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಸಿಟ್ಟಿಗೆದ್ದರು. ತಗಡೂರು ಕಾಂಗ್ರಸ್ ಬ್ಲಾಕ್ ಅಧ್ಯಕ್ಷರನ್ನು ಬದಲಾ ವಣೆ ಮಾಡುವಂತೆ ಕೂಗಾಡುತ್ತಿದ್ದ ಕಾರ್ಯಕರ್ತ ರನ್ನು ಬೈದು ಸುಮ್ಮನಾಗಿಸಿದರು. ಶಾಸಕ ಡಾ.ಯತೀಂದ್ರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್. ಧ್ರುವನಾರಾಯಣ, ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ಕಳಲೆ ಕೇಶವಮೂರ್ತಿ, ಎ.ಆರ್.ಕೃಷ್ಣಮೂರ್ತಿ, ಸತ್ಯನಾರಾಯಣ ಇನ್ನಿತರರು ಉಪಸ್ಥಿತರಿದ್ದರು.

Translate »