ರಾಜ್ಯ ಯೋಜನಾ ಮಂಡಳಿ ಅಧ್ಯಕ್ಷರನ್ನಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ನೇಮಕಕ್ಕೆ ನಿರ್ಧಾರ
ಮೈಸೂರು

ರಾಜ್ಯ ಯೋಜನಾ ಮಂಡಳಿ ಅಧ್ಯಕ್ಷರನ್ನಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ನೇಮಕಕ್ಕೆ ನಿರ್ಧಾರ

June 13, 2018

ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಮಂಡಳಿಯಲ್ಲಿ ನಾರಾಯಣಮೂರ್ತಿ ಅವರು ಹೆಸರಿಸುವ ತಜ್ಞರೇ ಇರಲಿದ್ದಾರೆ. ಇದುವರೆಗೂ ಮಂಡಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿತ್ತು. ಇನ್ನು ಮುಂದೆ ಮಂಡಳಿಗೆ ಸಂಪುಟ ದರ್ಜೆ ಸ್ಥಾನ ನೀಡಿ, ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗುವುದು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಸಂಪನ್ಮೂಲ ಕ್ರೋಢೀಕರಣ, ಹೊಸ ಯೋಜನೆಗಳ ಅನುಷ್ಠಾನದ ಉದ್ದೇಶ ದಿಂದ ಇದೇ ಮೊದಲ ಬಾರಿಗೆ ಉದ್ಯಮಿ ಯೊಬ್ಬರನ್ನು ಇಂತಹ ಉನ್ನತ ಹುದ್ದೆಗೆ ನೇಮಿಸಲಾಗುತ್ತಿದೆ. ಆರ್ಥಿಕ ತಜ್ಞ ಡಾ. ಡಿ.ಎಂ. ನಂಜುಂಡಪ್ಪನಂತರ ಯೋಜನಾ ಮಂಡಳಿಗೆ ಸಂಬಂಧಪಟ್ಟ ಸರ್ಕಾರಗಳು ರಾಜಕೀಯ ನೇಮಕಾತಿಗಳನ್ನೇ ಇದುವರೆಗೂ ಮಾಡಿವೆ. ಇಂತಹ ಮಂಡಳಿಗಳಿಂದ ಸರ್ಕಾರಕ್ಕೆ ಹೊರೆಯಾಗಿದೆಯೇ ಹೊರತು ಜನರಿಗೆ ಅನುಕೂಲವಾಗುವ ಯಾವುದೇ ಮೌಲ್ಯಯುತ ವರದಿಗಳು ಬಂದಿಲ್ಲ. ಮೈತ್ರಿ ಸರ್ಕಾರ ರಚನೆಗೂ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೂ ಜನರಿಗೆ ಭರವಸೆಯ ಮಹಾಪೂರವನ್ನೇ ಹರಿಸಿವೆ. ಇವುಗಳ ಅನುಷ್ಠಾನ ಹಾಗೂ ಸರ್ಕಾರದ ದೈನಂದಿನ ಕಾರ್ಯಕ್ರಮಗಳಿಗೆ ಸಂಪನ್ಮೂಲದ ಕೊರತೆ ಇದೆ. ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸರ್ಕಾರಕ್ಕೆ ಉದ್ಯಮಿಗಳು ಹಾಗೂ ಆರ್ಥಿಕತಜ್ಞರ ಅವಶ್ಯವಿದೆ.

ನಾರಾಯಣಮೂರ್ತಿ ಅಂತಹವರಿಗೆ ಇದರ ಹೊಣೆಗಾರಿಕೆ ವಹಿಸುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ದಿಮೆದಾರರು ಮುಂದೆ ಬರುತ್ತಾರೆ. ಹೊಸ ಉದ್ದಿಮೆಗಳು ಸ್ಥಾಪಿತವಾಗುವುದರಿಂದ ಒಂದೆಡೆ ನಿರುದ್ಯೋಗ ಸಮಸ್ಯೆ ನಿವಾರಣೆ ಜೊತೆಗೆ ರಾಜ್ಯದ ಬೊಕ್ಕಸವೂ ತುಂಬುತ್ತದೆ. ತಜ್ಞರ ಸಮಿತಿ ಸರ್ಕಾರಕ್ಕೆ ಆಗಿಂದಾಗ್ಯೆ ಮಾರ್ಗದರ್ಶನ ನೀಡುವುದರಿಂದ ಹೊಸ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ. ನೀರಾವರಿ, ವಿದ್ಯುತ್ ಮತ್ತು ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಬಂಡವಾಳ ವನ್ನು ಬಡ್ಡಿರಹಿತವಾಗಿ ವಿದೇಶಗಳಿಂದ ತರಲು ಇವರ ನೇತೃತ್ವ ನೆರವಾಗಲಿದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಈ ತೀರ್ಮಾನಕ್ಕೆ ಬಂದಿದ್ದಾರೆ.

Translate »