ಸಮಾಜ ಸೇವಾ ಕಾರ್ಯಗಳ ಮೂಲಕ ಮಾಜಿ  ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ
ಮೈಸೂರು

ಸಮಾಜ ಸೇವಾ ಕಾರ್ಯಗಳ ಮೂಲಕ ಮಾಜಿ  ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ

August 13, 2018

ಮೈಸೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 71ನೇ ಜನ್ಮ ದಿನವನ್ನು ಭಾನುವಾರ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ವಿವಿಧ ಸಮಾಜ ಸೇವಾ ಕಾರ್ಯವನ್ನು ನಡೆಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಆಚರಿಸಿದರು.

ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಬಡ ಮಹಿಳೆಯರಿಗೆ ಸೀರೆ, ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಜೈಕಾರ ಹಾಕಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ ನೇತೃತ್ವದಲ್ಲಿ ಇಂದು ಬೆಳಗ್ಗೆ ಆದಿ ಪೂಜಿತ ಗೆಳೆಯರ ಬಳಗ, ಸಿದ್ಧಿವಿನಾಯಕ ಯುವಕರ ಸೇವಾ ಸಂಘ, ಪಂಚಮುಖಿ ಗಣಪತಿ ಯುವಕರ ಸಂಘದ ಸದಸ್ಯರು ಚಾಮುಂಡಿಬೆಟ್ಟ ಹಾಗೂ ಗರಡಿಕೇರಿಯ ಮಹದೇಶ್ವರ ದೇವಸ್ಥಾನದಲ್ಲಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರಿಗೆ ಆಯುರ್ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು. ಬಳಿಕ ಮಧ್ಯಾಹ್ನ 1 ಗಂಟೆಗೆ ತಿಲಕ್‍ನಗರದಲ್ಲಿರುವ ಸರ್ಕಾರಿ ಅಂಧ, ಕಿವುಡ, ಮೂಗರ ಶಾಲೆಯ 250 ವಿದ್ಯಾರ್ಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮೈಲ್ಯಾಕ್ ಮಾಜಿ ಅಧ್ಯಕ್ಷ ಅನಂತು, ಪ್ರಧಾನ ಕಾರ್ಯದರ್ಶಿ ಬಸವರಾಜನಾಯಕ, ಮುಡಾ ಮಾಜಿ ಸದಸ್ಯ ಭಾಸ್ಕರ್ ಎಲ್ ಗೌಡ, ಆರ್.ಪ್ರಕಾಶ್, ಚಂದಶೆÉೀಖರ್, ಪ್ರೇಮಕುಮಾರ್, ಕೃಷ್ಣ, ಮಾದೇಶ್, ಪಾಪಣ್ಣ, ರವಿಕುಮಾರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಮಾತನಾಡಿ, ಕಳೆದ ಐದು ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಯಾವುದೆ ಕಳಂಕವಿಲ್ಲದೆ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರು ಮೈಸೂರು ನಗರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಸಾಕಷ್ಟು ಅನುದಾನ ನೀಡಿದ್ದಾರೆ. ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಜನ ನಾಯಕರಾಗಿರುವ ಸಿದ್ದರಾಮಯ್ಯ ಅವರ ಜನ್ಮ ದಿನವನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಈಡುಗಾಯಿ: ಜಿಲ್ಲಾ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ವಿಬಾಗದ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಬೆಳಿಗ್ಗೆ 8.30ರ ವೇಳೆಗೆ ಚಾಮುಂಡಿಬೆಟ್ಟದಲ್ಲಿ 101 ತೆಂಗಿನ ಕಾಯಿಗಳನ್ನು ಒಡೆದು ನೆಚ್ಚಿನ ಜನನಾಯಕನಿಗೆ ಶುಭವಾಗಲೆಂದು ಪ್ರಾರ್ಥಿಸಿದರು. ನಂತರ ಚೆಲುವಾಂಬ ಆಸ್ಪತ್ರೆಗೆ ತೆರಳಿದ ಕಾರ್ಯಕರ್ತರು ಸುಮಾರು 101 ಬಾಣಂತಿಯರಿಗೆ ಹೊದಿಕೆಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಮಾರುತಿ, ಉಪಾಧ್ಯಕ್ಷ ಹಿನಕಲ್ ಉದಯ್, ಪ್ರಧಾನ ಕಾರ್ಯದರ್ಶಿ ಕಾಡನಹಳ್ಳಿ ಸ್ವಾಮಿ, ಮುಖಂಡರುಗಳಾದ ಸ್ವಾಮಿಗೌಡ, ನಾಗನಹಳ್ಳಿ ಉಮಾಶಂಕರ್, ರವಿ ಕೆಂಪಿಸಿದ್ದನಹುಂಡಿ, ರಾಣಿ ಶಿವಣ್ಣ, ಎ.ಎನ್.ಸ್ವಾಮಿ, ಮಲ್ಲಿಕಾರ್ಜುನ, ಮಹದೇವಸ್ವಾಮಿ, ರಾಜೇಶ್, ನಾಗರಾಜಾಚಾರ್, ಬಸವಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅನಾಥಾಶ್ರಮದಲ್ಲಿ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಪಾಲಿಕೆ ಸದಸ್ಯ ಚೌಹಳ್ಳಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸಿದರು. ಬೆಳಿಗ್ಗೆ 10.30ಕ್ಕೆ ಮೈಸೂರಿನ ಛಾಯಾದೇವಿ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕೇಕ್ ಕತ್ತರಿಸಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಅನ್ನಪೂರ್ಣ ರಮೇಶ್ ಹಾಗೂ ಇನ್ನಿತರರು ಇದ್ದರು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯಲ್ಲಿ ಅತ್ಯುತ್ತಮವಾದ ಆಡಳಿತ ನಡೆಸಿ, ದೇಶದ ಗಮನ ಸೆಳೆದಿದ್ದಾರೆ. ಯಾವುದೇ ತಾರತಮ್ಯ ನೀತಿ ಅನುಸರಿದೆ ಎಲ್ಲಾ ವರ್ಗದ, ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಅನ್ನಭಾಗ್ಯದಂತಹ ಯೋಜನೆಯನ್ನು ಅನುಷ್ಠಾನಗೊಳಿಸಿ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿದ ಕೀರ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಇನ್ನಷ್ಟು ಕೀರ್ತಿ ಲಭಿಸಲೆಂದು ಪ್ರಾರ್ಥಿಸಿದ್ದೇವೆ ಎಂದರು.

ಸೀರೆ ವಿತರಣೆ: ನಗರ ಪಾಲಿಕೆಯ 58ನೇ ವಾರ್ಡ್‍ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡ ಹೆಚ್.ಸಿ.ಕೃಷ್ಣಕುಮಾರ್ ಸಾಗರ್, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜನುಮ ದಿನದ ಹಿನ್ನೆಲೆಯಲ್ಲಿ ಬಡ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಯಿತು.

Translate »