ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ
ಮೈಸೂರು

ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ

April 30, 2019

ಮೈಸೂರು: ರಿಯಾಯಿತಿ ಮೂಲಕ ಕಂದಾಯ ವಸೂಲಾತಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್‍ಸ್ವಾಮಿ ಆಗ್ರಹಿಸಿದ್ದಾರೆ.

ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಕರ ಸಂಗ್ರಹ ಅಭಿ ಯಾನದ ಮೂಲಕ ಶೇ.5ರಷ್ಟು ರಿಯಾಯಿತಿಯಲ್ಲಿ ಕಂದಾಯ ಸಂಗ್ರಹಿಸಲಾಗುತ್ತದೆ. ಇದರಿಂದ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ವಾಗುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಕಂದಾಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಕಂದಾಯ ನಿರೀಕ್ಷಕರು ಸೇರಿದಂತೆ ಪಾಲಿಕೆಯ ಬಹುತೇಕ ಅಧಿಕಾರಿಗಳು ಒಂದೂವರೆ ತಿಂಗಳಿಂದ ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡಿ ದ್ದರಿಂದ ಕಂದಾಯ ವಸೂಲಿಯಲ್ಲಿ ಹಿನ್ನಡೆಯಾಗಿದೆ. ನಾಳೆ(ಏ.30) ಕಡೇ ದಿನವಾಗಿದ್ದು, ಇನ್ನೂ ಶೇ.30ರಷ್ಟು ಜನ ಕಂದಾಯ ಪಾವತಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಿಯಾಯಿತಿಯಲ್ಲಿ ಕಂದಾಯ ಸಂಗ್ರಹ ಅವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸುವಂತೆ ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡುವುದಾಗಿ ಸಂದೇಶ್‍ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಬೇಕು: ಪ್ರಸ್ತುತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಕಂದಾಯ ಪಾವತಿಗೆ ಆನ್‍ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಈ ಹಿಂದೆಯೇ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆನ್‍ಲೈನ್ ಸೇವೆ ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿತ್ತಾದರೂ ಈವರೆಗೂ ಸಾಧ್ಯವಾಗಿಲ್ಲ. ಸದ್ಯ ಕಂದಾಯ ಪಾವತಿಗೆ ವಲಯ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಅರ್ಜಿ ಹಾಗೂ ಚಲನ್ ಭರ್ತಿ ಮಾಡಲು ಅರ್ಧ ತಾಸು ಬೇಕು. ಅರ್ಜಿ ತುಂಬುವವರಿಗೆ ಶುಲ್ಕ ಪಾವತಿಸ ಬೇಕು. ಬಳಿಕ ಇನ್ನೊಂದು ಕೌಂಟರ್‍ನಲ್ಲಿ ಅರ್ಜಿ ಸಂಖ್ಯೆ ನೋಂದಣಿ ಮಾಡಿಸಬೇಕು. ನಂತರ ಮತ್ತೊಂದು ಕೌಂಟರ್‍ನಲ್ಲಿ ಹಣ ಪಾವತಿಸಬೇಕು. ಒಟ್ಟಾರೆ ಕಂದಾಯ ಪಾವತಿ ಮಾಡಲು ದಿನ ಪೂರ್ತಿ ಮೀಸಲಿಡಬೇಕು. ವಯೋ ವೃದ್ಧರು, ಮಹಿಳೆಯರು ಇದರಿಂದ ತುಂಬಾ ನೊಂದಿದ್ದಾರೆ. ಆನ್‍ಲೈನ್ ಸೇವೆಯನ್ನು ಅನುಷ್ಠಾನಕ್ಕೆ ತಂದರೆ ಇಷ್ಟೆಲ್ಲಾ ಕಸರತ್ತು ಮಾಡುವ ಅಗತ್ಯವಿರುವುದಿಲ್ಲ. ಸರಳವಾಗಿ ಕಂದಾಯ ಪಾವತಿ ಮಾಡಬಹುದು. ಅಲೆ ದಾಟ ತಪ್ಪುವುದರಿಂದ ಸಾರ್ವಜನಿಕರ ಶ್ರಮ, ಸಮಯ, ಹಣ ಉಳಿತಾಯವಾಗುತ್ತದೆ. ಪೇಪರ್ ಬಳಕೆ ಕಡಿಮೆ ಯಾಗುತ್ತದೆ. ಪಾಲಿಕೆ ಸಿಬ್ಬಂದಿ ಮೇಲಿನ ಕಾರ್ಯ ದೊತ್ತಡ ಕಡಿಮೆಯಾಗಿ ಸಮರ್ಪಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಸ್ಮಾರ್ಟ್ ಸಿಟಿ ಕೈತಪ್ಪು ವುದಕ್ಕೆ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸದಿರುವುದು ಪ್ರಮುಖ ಕಾರಣ. ಹಾಗಾಗಿ ಕೂಡಲೇ ಆನ್‍ಲೈನ್ ಮೂಲಕ ಕಂದಾಯ ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ತೆರಿಗೆ ಪಾವತಿಯಲ್ಲಿನ ಗೊಂದಲ ನಿವಾರಿಸಿ: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆಲ ಬಡಾವಣೆಗಳ ನಿವಾಸಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ಬಡಾವಣೆ ಅಭಿವೃದ್ಧಿ ಗೊಳಿಸಿ, ಫಲಾನುಭವಿಗಳಿಗೆ ನಿವೇಶನ ಹಂಚುವುದಷ್ಟೇ ಮುಡಾ ವ್ಯಾಪ್ತಿಯ ಅಧಿಕಾರ. ನಿರ್ವಹಣೆ ಜವಾಬ್ದಾರಿ ನಿರ್ವಹಿಸದ ಕಾರಣ ಕರ ಸಂಗ್ರಹಿಸಲು ಅವಕಾಶವಿಲ್ಲ. ಮುಡಾ ಅಭಿವೃದ್ಧಿಗೊಳಿಸಿರುವ ಕೆಲ ಬಡಾವಣೆಗಳ ನಿವಾಸಿಗಳು ಅಲ್ಲಿಗೇ ತೆರಿಗೆ ಕಟ್ಟುತ್ತಿದ್ದಾರೆ. ನಗರ ಪಾಲಿಕೆ ಹಾಗೂ ಮುಡಾ ನಡುವಿನ ಸಮನ್ವಯತೆ ಕೊರತೆಯಿಂದ ಹಲವು ವರ್ಷಗಳಿಂದ ಕೆಲ ಬಡಾವಣೆಗಳಿಗೆ ಪ್ಲಾನ್ ಅಪ್ರೋವಲ್ ನೀಡುತ್ತಿಲ್ಲ, ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ. ಈ ಬಗ್ಗೆ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಗೊಂದಲ ಪರಿಹರಿಸಲು ಮುಂದಾಗಬೇಕು. ನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಬಡಾವಣೆಗಳ ನಿವಾಸಿಗಳು ಆಯಾಯ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಪಾವತಿಸುವಂತೆ ಆದೇಶಿಸಬೇಕು. ಇದರಿಂದ ತೆರಿಗೆ ಹಣದಲ್ಲಿ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯ ಮಾಡಲು ಅನುವಾಗುತ್ತದೆ ಎಂದು ಸಂದೇಶ್‍ಸ್ವಾಮಿ ಆಗ್ರಹಿಸಿದರು.

Translate »