ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗೆ ಕನ್ನ
ಹಾಸನ

ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗೆ ಕನ್ನ

June 24, 2018

ಹಾಸನ: ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗೆ ಕನ್ನ ಹಾಕಿರುವ ಖದೀಮರು ಚಿನ್ನಾಭರಣ, ನಗದು ದೋಚಿ ಪರಾರಿ ಯಾಗಿರುವ ಘಟನೆ ನಗರದ ವಿವೇಕನಗರ ಬಡಾವಣೆ ಯಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಸುತ್ತ ಮುತ್ತಲ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.

ನಗರದ ವಿವೇಕ ನಗರ ಬಡಾವಣೆ 2ನೇ ಹಂತದಲ್ಲಿ ಈ ಘಟನೆ ನಡೆದಿದ್ದು, ಸಂತೋಷ್ ಮತ್ತು ಶಶಿಕಲಾ ದಂಪತಿ ತಿರುಪತಿಗೆ ತೆರಳಿದ್ದ ವೇಳೆ ಕಳ್ಳರು ಅವರ ಮನೆಗೆ ನುಗ್ಗಿ ಲಾಕರ್ ಒಡೆದು ನಗದು ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಂತರ ಇದೇ ಬಡಾವಣೆಯ ಜ್ಯೋತಿ ಎಂಬುವವರ ಮನೆಗೆ ನುಗ್ಗಿರುವ ಕಳ್ಳರು, ಮನೆಯಲ್ಲಿಟ್ಟಿದ್ದ 4 ಸಾವಿರ ರೂ.ಗಳನ್ನು ದೋಚಿದ್ದಾರೆ. ಅಲ್ಲದೆ ನಿರ್ಮಾಣ ಹಂತದಲ್ಲಿರುವ ಮನೆ ಸೇರಿದಂತೆ ಮತ್ತೆರಡು ಮನೆಗಳಿಗೆ ಕನ್ನ ಹಾಕಿದ ಖದೀಮರು ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಸಂತೋಷ್ ಶಶಿಕಲಾ ದಂಪತಿಗೆ ತಿಳಿಸಲು ನೆರೆಮನೆಯವರು ಯತ್ನಿಸಿದರಾದರೂ ಅವರು ಫೋನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಮನೆಗೆ ಬಂದ ಸಂಬಂಧಿಕರು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡು ಪೆÇಲೀಸ್ ಠಾಣೆಗೆ ದೂರು ನೀಡಿದರು. ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು, ಶ್ವಾನ ದಳ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಎಲ್ಲಾ ಸರಣ ಕಳ್ಳತನ ಒಂದೇ ರಾತ್ರಿ ನಡೆದಿರುವುದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿರುವುದರಿಂದ ಯಾರೊ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »