ನಿಧಿಗಾಗಿ ಭೂಮಿ ಅಗೆಯುತ್ತಿದ್ದ ನಾಲ್ವರ ಬಂಧನ
ಮಂಡ್ಯ

ನಿಧಿಗಾಗಿ ಭೂಮಿ ಅಗೆಯುತ್ತಿದ್ದ ನಾಲ್ವರ ಬಂಧನ

July 19, 2018

ನಾಗಮಂಗಲ:  ನಿಧಿ ಆಸೆಗಾಗಿ ಮಡಿಕೆ ಕುಡಿಕೆಗಳಿಂದ ಪೂಜೆ ಮಾಡಿ ಭೂಮಿ ಅಗೆಯುತ್ತಿದ್ದವನ್ನು ಗ್ರಾಮಸ್ಥರೇ ಹಿಡಿದು ಧರ್ಮದೇಟು ನೀಡಿ ಬೆಳ್ಳೂರು ಠಾಣೆಯ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಿವೃತ್ತ ಸೈನಿಕ ಹಾಗೂ ಗ್ರಾಮದ ನಿವಾಸಿ ಚಿಕ್ಕೇಗೌಡ, ಬೆಂಗಳೂರಿನ ಬಾಬು, ಮಹೇಶ್, ಗಂಗಹನುಮಯ್ಯ ಬಂಧಿತರು. ಚಿಕ್ಕೇಗೌಡ ಅವರು ತಮ್ಮ ಜಮೀನಿನಲ್ಲಿ ಅಪಾರ ನಿಧಿ ಇದೆ ಎಂದು ಯಾರದೋ ಮಾತನ್ನು ನಂಬಿ ನಿಧಿ ಪಡೆಯಲು ಬೆಂಗಳೂರಿನ ನೆಲಮಂಗಲದ ಓರ್ವ ಪಂಡಿತರು ಸೇರಿ 5 ಜನರನ್ನು ಕರೆಸಿಕೊಂಡು ಭೂಮಿ ಅಗೆಯುತ್ತಿದ್ದಾಗ ಗ್ರಾಮಸ್ಥರಿಗೆ ಸಿಕ್ಕಿ ಬಿದ್ದಿದ್ದಾರೆ.

ಬೆಳಿಗ್ಗೆಯೇ ಜಮೀನಿನ ಹತ್ತಿರ ಗುರುತು ಮಾಡಿದ ಸ್ಥಳದಲ್ಲಿ ಮಡಿಕೆ ಕುಡಿಕೆಗಳನ್ನು ವೃತ್ತಾಕಾರದಲ್ಲಿ ಇಟ್ಟು ಪೂಜೆ ಮಾಡಿರುವ ನಿಧಿಗಳ್ಳರು, ಹಾರೆ ಗುದ್ದಲಿಗಳಿಂದ ಭೂಮಿ ಅಗೆಯುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ನಿಧಿಗಳ್ಳರನ್ನ ಹಿಡಿದು ಧರ್ಮ ದೇಟು ನೀಡಿದ್ದಾರೆ. ಈ ಸಂದರ್ಭದಲ್ಲಿ ಪೂಜೆ ಮಾಡಿರುವ ಪಂಡಿತ ಸೇರಿ ಇಬ್ಬರು ಪರಾರಿಯಾಗಿದ್ದಾರೆ. ಇತರೆ ನಾಲ್ವರನ್ನು ಗ್ರಾಮಸ್ಥರು ಹಿಡಿದು ಬೆಳ್ಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಅವರು ಇದೇ ರೀತಿ ನಿಧಿಗಾಗಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಮಾಹಿತಿ ಮೇರೆಗೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿದ್ದಾರೆ.

Translate »