ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ ಸೇರಿ ನಾಲ್ವರಿಗೆ ಶಿಕ್ಷೆ
ಮೈಸೂರು

ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ ಸೇರಿ ನಾಲ್ವರಿಗೆ ಶಿಕ್ಷೆ

June 29, 2018

ಮೈಸೂರು: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಪತಿರಾಯನನ್ನು ಕೊಲೆ ಮಾಡಿಸಿದ್ದ ಪತ್ನಿ ಸೇರಿ ನಾಲ್ವರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ನಂಜನಗೂಡು ತಾಲೂಕು, ಬಿದರಗೂಡು ಗ್ರಾಮದ ಬಿಳಿಗಿರಿ ಪುಟ್ಟರಾಜು, ರಂಗಶೆಟ್ಟಿ ಹಾಗೂ ಗೀತಾ ಎಂಬುವರೇ ಶಿಕ್ಷೆಗೊಳಗಾದ ಕೊಲೆ ಆರೋಪಿಗಳು. ಗ್ರಾಮದ ಬಿಳಿಗಿರಿ ಮತ್ತು ಗೀತಾ ನಡುವೆ ಅನೈತಿಕ ಸಂಬಂಧವಿದ್ದು, ಗೀತಾಳನ್ನು ಕುಮಾರ ಎಂಬುವರೊಂದಿಗೆ ಮದುವೆ ಮಾಡಲಾಗಿತ್ತು.

ಮದುವೆ ನಂತರವೂ ಗೀತಾ ಬಿಳಿಗಿರಿಯೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದರಿಂದ ಪತಿ ಕುಮಾರ ಅಡ್ಡಿಪಡಿಸುತ್ತಿದ್ದ. ತನ್ನ ಸರಸ-ಸಲ್ಲಾಪಕ್ಕೆ ಅಡ್ಡಿಯಾಗಿರುವ ಪತಿ ಕುಮಾರನನ್ನು ಮುಗಿಸಿಬಿಡುವಂತೆ ಗೀತಾ ಪ್ರಿಯಕರ ಬಿಳಿಗಿರಿಗೆ ಹೇಳಿದ್ದಳು.
ಗೀತಾಳೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ ಬಿಳಿಗಿರಿ, ತನ್ನ ಸ್ನೇಹಿತರಾದ ಪುಟ್ಟರಾಜು ಮತ್ತು ರಂಗಶೆಟ್ಟಿಯನ್ನು ಕರೆದುಕೊಂಡು, 2015ರ ಫೆಬ್ರವರಿ 17ರಂದು ರಾತ್ರಿ 8.30 ಗಂಟೆಗೆ ಮನೆಯಲ್ಲಿದ್ದ ಕುಮಾರನನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ, ಮುಂಜಾನೆ (ಮರು ದಿನ) 1 ಗಂಟೆಗೆ ತಲೆ ಮತ್ತು ಮರ್ಮಾಂಗಕ್ಕೆ ಸೈಕಲ್ ಚೈನ್‍ನಿಂದ ಹೊಡೆದಿದ್ದಲ್ಲದೆ, ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು.

ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಹುಲ್ಲಹಳ್ಳಿ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯ ಕುಮಾರ್ ಎಂ.ಆನಂದಶೆಟ್ಟಿ ಅವರು, ವಾದ-ಪ್ರತಿವಾದ ಆಲಿಸಿದ ನಂತರ ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೊದಲ ಆರೋಪಿ ಬಿಳಿಗಿರಿ ಮತ್ತು 4ನೇ ಆರೋಪಿ ಗೀತಾರಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದ ಇಬ್ಬರಿಗೆ ಸಾಧಾರಣ ಸಜೆ ವಿಧಿಸಿ ಇಂದು ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹೆಚ್.ಡಿ.ಆನಂದ ಕುಮಾರ್ ಅವರು ವಾದ ಮಂಡಿಸಿದ್ದರು.

 

Translate »