ಅಂಗಡಿ ತೆರವು ಖಂಡಿಸಿ ವಿಕಲಚೇತನ ರಸ್ತೆಯಲ್ಲಿ ಮಲಗಿ ಪ್ರತಿಭಟನೆ
ಮೈಸೂರು

ಅಂಗಡಿ ತೆರವು ಖಂಡಿಸಿ ವಿಕಲಚೇತನ ರಸ್ತೆಯಲ್ಲಿ ಮಲಗಿ ಪ್ರತಿಭಟನೆ

June 29, 2018

ಮೈಸೂರು:  ರಸ್ತೆ ಬದಿಯಲ್ಲಿದ್ದ ತನ್ನ ಪೆಟ್ಟಿಗೆ ಅಂಗಡಿ ತೆರವು ಮಾಡಿದ ಪಾಲಿಕೆಯ ಅಧಿಕಾರಿಗಳ ಕ್ರಮದಿಂದ ಬೇಸತ್ತು ವಿಕಲ ಚೇತನ ವ್ಯಾಪಾರಿಯೊಬ್ಬರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಬೆಳಿಗ್ಗೆ ಜೆಎಲ್‍ಬಿ ರಸ್ತೆಯ ಆರ್‍ಟಿಓ ವೃತ್ತದಲ್ಲಿ ನಡೆದಿದೆ.

ಮೈಸೂರಿನ ಆರ್‍ಟಿಓ ಕಚೇರಿ ಬಳಿ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ-ಟೀ ಹಾಗೂ ಬಿಸ್ಕೆಟ್ ವ್ಯಾಪಾರ ಮಾಡುತ್ತಿದ್ದ ಮಂಜುನಾಥ್, ಇಂದು ರಸ್ತೆಯ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದವರಾಗಿದ್ದಾರೆ. ವಾಹನ ಸಂಚಾರದ ನಡುವೆ ರಸ್ತೆಯಲ್ಲಿ ಮಲಗಿದ್ದ ಮಂಜುನಾಥ್ ಅವರನ್ನು ಕಂಡ ಸಂಚಾರಿ ಪೇದೆಯೊಬ್ಬರು ಸಮಾಧಾನ ಮಾಡಿ, ರಸ್ತೆ ಬದಿ ಕರೆತಂದರು.

ಕಾರಣ: ವಿಶೇಷ ಚೇತನ ಕ್ರೀಡಾಪಟುವೂ ಆಗಿರುವ ಮಂಜುನಾಥ್, ಜೀವನ ನಿರ್ವಹಣೆಗಾಗಿ ನಗರ ಪಾಲಿಕೆಯಿಂದ ಅನುಮತಿ ಪಡೆದು ಸಣ್ಣ ಅಂಗಡಿಯೊಂದನ್ನು ಆರ್‍ಟಿಓ ಕಚೇರಿ ಬಳಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದರು. ಕಾಫಿ-ಟಿ, ಬಿಸ್ಕೆಟ್ ಸೇರಿದಂತೆ ಕೆಲ ತಿಂಡಿ-ತಿನಿಸು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವ ದೂರುಗಳ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿ ವರ್ಗ ತೆರವುಗೊಳಿಸಿದ್ದರು.

ಇಂದು ಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಆರ್‍ಟಿಓ ಕಚೇರಿ ಸುತ್ತಮುತ್ತ ಪಾದಚಾರಿ ಮಾರ್ಗದಲ್ಲಿದ್ದ ಗೂಡಂಗಡಿಗಳು, ಫಾಸ್ಟ್ ಫುಡ್‍ಗಳನ್ನು ತೆರವು ಮಾಡಿದ್ದರು. ಇದರಲ್ಲಿ ಮಂಜುನಾಥ್ ಅವರ ಅಂಗಡಿಯೂ ಸೇರಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಅಂಗಡಿ ತೆರೆಯಲು ಬಂದಾಗ ಪಾಲಿಕೆಯ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿರುವುದನ್ನು ಕಂಡು ದಿಗ್ಭ್ರಾಂತರಾಗಿ ವಾಹನಗಳು ತೆರಳುತ್ತಿರುವಾಗಲೇ ರಸ್ತೆಯಲ್ಲಿ ಮಲಗಿ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಪೊಲೀಸರು ಹಾಗೂ ಸಾರ್ವಜನಿಕರು ಸಮಾಧಾನ ಮಾಡಿದರು.

ಈ ಹಿಂದೆ ಮೈಸೂರು ನಗರ ಪಾಲಿಕೆ ವತಿಯಿಂದ ಅಂಗಡಿ ನಡೆಸಲು ಅನುಮತಿ ಪಡೆದಿದ್ದೇನೆ. ಒಂಟಿಕೊಪ್ಪಲಿನಲ್ಲಿ ಅಂಗಡಿ ಇಡಲು ಮುಂದಾಗಿದ್ದೆ. ಆದರೆ ಕೆಲವರು ಅಡ್ಡಿ ಮಾಡಿದರು. ಕಳೆದ ಒಂದು ವರ್ಷದಿಂದ ಆರ್‍ಟಿಓ ಕಚೇರಿ ಬಳಿ ಅಂಗಡಿ ಇರಿಸಿಕೊಂಡಿದ್ದೆ. ಆದರೆ ಇಂದು ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮುಂದೆ ಜೀವನ ನಡೆಸುವುದು ಹೇಗೆ? ಎಂಬ ಚಿಂತೆ ಕಾಡುತ್ತಿದೆ. – ಮಂಜುನಾಥ್, ವ್ಯಾಪಾರಿ

Translate »