ಮೈಸೂರು: ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಪ್ರಕರಣ ಕೆ.ಆರ್.ಠಾಣೆಯಲ್ಲಿ ಭಾನುವಾರ ದಾಖಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ನಿವಾಸಿ ರಾಜೇಶ್ ಮತ್ತು ಮೈಸೂರಿನ ನಿವಾಸಿ ಕೇಶವಮೂರ್ತಿ ಮೋಸ ಹೋದವರು. ಮೈಸೂರಿನ ನಿವಾಸಿ ರಮಾಮಣಿ ಮತ್ತು ಕಾವ್ಯ ಮೋಸ ಮಾಡಿದವರು. ರಮಾಮಣಿ ಮತ್ತು ಕಾವ್ಯ ಎಂಬುವವರು ರಾಜೇಶ್ ಮತ್ತು ಕೇಶವ ಮೂರ್ತಿ ಅವರನ್ನು ಪರಿಚಯ ಮಾಡಿ ಕೊಂಡು, ಇವರ ಬಳಿ ಪ್ರತಿಷ್ಠಿತ ಬ್ಯಾಂಕ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ರಾಜೇಶ್ ನಿಂದ 5.50 ಲಕ್ಷ ರೂ, ಕೇಶವಮೂರ್ತಿ ಅವರಿಂದ 3 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ನಂತರ ರಾಜೇಶ್ ಮತ್ತು ಕೇಶವ ಮೂರ್ತಿ, ಕೆಲಸದ ಬಗ್ಗೆ ರಮಾಮಣಿ ಮತ್ತು ಕಾವ್ಯರ ಬಳಿ ವಿಚಾರಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಏ.29 ಹಾಗೂ ಮೇ.8 ರಂದು ಕೆ.ಆರ್.ಠಾಣೆಯಲ್ಲಿ ರಮಾ ಮಣಿ ಮತ್ತು ಕಾವ್ಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ರಾಜೇಶ್ ಮತ್ತು ಕೇಶವ್, ರಮಾಮಣಿ ಅವರಿಗೆ ಕರೆ ಮಾಡಿ, ಹಣ ವಾಪಸ್ಸು ಕೊಡುವಂತೆ ಒತ್ತಡ ಹಾಕಿದ್ದಾರೆ. ಇವರ ಒತ್ತಡಕ್ಕೆ ತಾಳಲಾರದೆ ರಮಾಮಣಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಈ ಸಂಬಂಧ ಇಬ್ಬರ ವಿರುದ್ದ ಕೆ.ಆರ್.ಠಾಣೆ ವಂಚನೆ ಪ್ರಕರಣ ದಾಖಲಾಗಿದ್ದು, ಇಲ್ಲಿಯ ವರೆಗೂ ಒಟ್ಟು ಲಕ್ಷಾಂತರ ರೂ. ವಂಚಿಸಿದ ಮೂರು ಪ್ರತ್ಯೇಕ ವಂಚನೆ ಪ್ರಕರಣ ದಾಖಲಾಗಿದೆ.