ಇಂದು ಅರಮನೆ ಆವರಣಕ್ಕೆ ಗಜಪಡೆ
ಮೈಸೂರು

ಇಂದು ಅರಮನೆ ಆವರಣಕ್ಕೆ ಗಜಪಡೆ

September 5, 2018

ಮೈಸೂರು: ಮೈಸೂರಿನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಆತಿಥ್ಯದಲ್ಲಿರುವ ಅರ್ಜುನ ನೇತೃತ್ವದ ದಸರಾ ಗಜಪಡೆ ನಾಳೆ(ಸೆ.5) ಅರಮನೆ ಪ್ರವೇಶಿಸಲಿದೆ.

ಬುಧವಾರ ಸಂಜೆ 4.30 ಗಂಟೆಗೆ ಅರಮನೆ ಪೂರ್ವ ದ್ವಾರಕ್ಕೆ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ 6 ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಜಿಲ್ಲಾಡಳಿತವು ಬರಮಾಡಿಕೊಳ್ಳಲಿದೆ. ಈಗಾಗಲೇ ವೀರನಹೊಸಹಳ್ಳಿ ಹಾಗೂ ಬಂಡೀಪುರದಿಂದ 1 ಆನೆ ಸೇರಿ ಮೊದಲ ತಂಡದಲ್ಲಿ 6 ಆನೆಗಳು ಮೈಸೂರು ತಲುಪಿದ್ದು,
ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ಬೀಡು ಬಿಟ್ಟಿವೆ. ಬುಧವಾರ ಮಧ್ಯಾಹ್ನ 3 ಗಂಟೆಗೆ ಹಿರಿಯ ಅರಣ್ಯಾಧಿಕಾರಿಗಳು ಗಜಪಡೆಗೆ ಅರಣ್ಯ ಭವನದಲ್ಲಿ ಪೂಜೆ ಸಲ್ಲಿಸಿ ನಂತರ ಅರಮನೆಗೆ ಬೀಳ್ಕೊಡುವರು.

ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿ ವತಿಯಿಂದ ಸಂಜೆ 4.30 ಗಂಟೆಗೆ ಅರಮನೆಯಲ್ಲಿ ಸ್ವಾಗತ ಕಾರ್ಯಕ್ರಮ ನಿಗದಿಯಾಗಿದ್ದು, ಸಚಿವರು, ಸಂಸದರು, ಶಾಸಕರು, ಮೇಯರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಆನೆಗಳನ್ನು ಬರಮಾಡಿಕೊಳ್ಳುವ ವೇಳೆ ಉಪಸ್ಥಿತರಿರುವರು. ಅರ್ಜುನ, ಗೋಪಿ, ಧನಂಜಯ, ವಿಕ್ರಮ, ವರಲಕ್ಷ್ಮಿ ಹಾಗೂ ಚೈತ್ರಾ ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಲಿದ್ದು, ಬುಧವಾರ ಅರಮನೆ ಪ್ರವೇಶಿಸಲಿರುವ ಆನೆಗಳು.

ಎರಡನೇ ತಂಡದಲ್ಲಿ ದುಬಾರೆಯಿಂದ ಕಾವೇರಿ, ವಿಜಯ, ನಾಗರಹೊಳೆಯಿಂದ ಬಲರಾಮ, ಅಭಿಮನ್ಯು, ದ್ರೋಣ ಹಾಗೂ ಗೋಪಾಲಸ್ವಾಮಿ ಮೈಸೂರಿಗೆ ಬರಲಿದ್ದಾರೆ. ಜಿಲ್ಲಾ ಮಂತ್ರಿಗಳು ನಿಗಧಿ ಮಾಡಿದ ದಿನ 2ನೇ ತಂಡದ ಗಜಪಡೆಯನ್ನು ಕರೆತರಲಾಗುವುದು ಎಂದು ಪಶುವೈದ್ಯಾಧಿಕಾರಿ ಡಾ.ನಾಗರಾಜು ತಿಳಿಸಿದ್ದಾರೆ. ಗಜಪಡೆ ಸ್ವಾಗತಕ್ಕೆ ಅರಮನೆ ಮಂಡಳಿ ವತಿಯಿಂದ ಸಕಲ ಸಿದ್ಧತೆ ನಡೆಸುತ್ತಿದ್ದು, ಆನೆಗಳು, ಮಾವುತರು ಮತ್ತು ಕಾವಾಡಿಗಳ ಕುಟುಂಬ ವಾಸ್ತವ್ಯ ಹೂಡಲು ವ್ಯವಸ್ಥೆ ಕಲ್ಪಿಸಲಾಗಿದೆ.

Translate »