ಕಾಂಗ್ರೆಸ್‍ನ ಗಂಗಾಂಬಿಕೆ ಮೇಯರ್,  ಜೆಡಿಎಸ್‍ನ ರಮೀಳಾ ಉಪ ಮೇಯರ್
ಮೈಸೂರು

ಕಾಂಗ್ರೆಸ್‍ನ ಗಂಗಾಂಬಿಕೆ ಮೇಯರ್,  ಜೆಡಿಎಸ್‍ನ ರಮೀಳಾ ಉಪ ಮೇಯರ್

September 29, 2018

ಬೆಂಗಳೂರು:  ಸರ್ಕಾರ ಪತನಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದ್ದ ಬಿಜೆಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತ್ತೊಮ್ಮೆ ಭಾರೀ ಮುಖಭಂಗ ಅನುಭವಿಸಿದೆ.

ಪಾಲುದಾರ ಪಕ್ಷ ಕಾಂಗ್ರೆಸ್‍ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಹಾಗೂ ಜೆಡಿಎಸ್‍ನ ರಮೀಳಾ ಉಮಾಶಂಕರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಸೋಲು ಖಚಿತ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪದಚ್ಯುತಗೊಳಿಸಿ, ಅಧಿಕಾರ ಹಿಡಿಯುವುದಲ್ಲದೆ, ಬಿಬಿಎಂಪಿಯಲ್ಲೂ ಆಪರೇಷನ್ ಕಮಲದ ಮೂಲಕ ಪ್ರಸಕ್ತ ಅಧಿಕಾರಾವಧಿಯ ಕೊನೆ ವರ್ಷದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಆ ಪಕ್ಷದ ನಾಯಕರು ಹೇಳಿಕೆ ನೀಡಿದ್ದರು.

ಆದರೆ ಚುನಾವಣೆ ದಿನವಾದ ಇಂದು, ಭಾರೀ ಅಂತರದಿಂದ ಸೋಲು ಕಾಣುತ್ತೇವೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮತದಾನಕ್ಕೂ ಮುನ್ನವೇ ಸಭಾತ್ಯಾಗ ಮಾಡಿದರು. ಪಾಲಿಕೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ನಾಯಕರ ನಡವಳಿಕೆ ಬಗ್ಗೆ ವ್ಯಂಗ್ಯವಾಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನನ್ನ ಸರ್ಕಾರ ಪತನಗೊಳಿಸಲು ಹೈ-ವೋಲ್ಟೇಜ್ ಡ್ರಾಮಾ ನಡೆದಿತ್ತು ಎಂದರು.

Translate »