ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ
ಮೈಸೂರು

ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ

September 29, 2018

ನವದೆಹಲಿ: 800 ವರ್ಷಗಳ ಪದ್ಧತಿ ತೆರೆ ಎಳೆಯಲಾಗಿದ್ದು, ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ ಸಿಜೆ ದೀಪಕ್ ಮಿಶ್ರಾ ಸೇರಿದಂತೆ ಪಂಚ ಪೀಠ ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪನ್ನು ನೀಡಿದ್ದಾರೆ. ದೀಪಕ್ ಮಿಶ್ರಾ ಅವರು ತಮ್ಮ ತೀರ್ಪಿನಲ್ಲಿ ಮಹಿಳೆಯರೂ ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರಂತೆ ನೋಡಬಾರದು. ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕು ಎಂದು ಹೇಳಿದ್ದು ಕೊನೆಗೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.

ಮುಟ್ಟಾದ ಮಹಿಳೆಯರಿಗೆ ದೇವಸ್ಥಾನದ ಪ್ರವೇಶದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ಅಕ್ಟೋಬರ್ 13ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವ ಸ್ಥಾನದ ಆವರಣಕ್ಕೆ ಭೇಟಿ ನೀಡಲುಅವಕಾಶವಿರಲಿಲ್ಲ.

ತೀರ್ಪು ಪಾಲನೆ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎ ಪದ್ಮಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಧಾರ್ಮಿಕ ಮುಖಂಡರ ಬೆಂಬಲ ಪಡೆದು, ದೇವಸ್ವಂ ಮಂಡಳಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ತೀರ್ಪಿನ ಪೂರ್ಣಪಾಠವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ, ನಂತರ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇವೆ ಎಂದು ಎ ಪದ್ಮಕುಮಾರ್ ಹೇಳಿದ್ದಾರೆ. “ನಾವು ಈಗ ಇರುವ ಧಾರ್ಮಿಕ ಪದ್ಧತಿಗಳನ್ನೇ ಮುಂದುವರೆಸಬೇಕೆಂದಿದ್ದೇವೆ” ಎಂಬುದನ್ನು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು, ಎಂದು ಪದ್ಮಕುಮಾರ್ ಹೇಳಿದ್ದಾರೆ. ಆದರೆ ಈಗ ಬೇರೆ ಯಾವುದೇ ಮಾರ್ಗವಿಲ್ಲದೇ ತೀರ್ಪನ್ನು ದೇವಸ್ವಂ ಮಂಡಳಿ ಜಾರಿಗೆ ತರಬೇಕಿದೆ.

“ಕೋರ್ಟ್ ತೀರ್ಪು ಬೇಸರ ಮೂಡಿಸಿದೆ. ಆದರೆ ನಾವು ಅದನ್ನು ಒಪ್ಪುತ್ತೇವೆ, ಸಧ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಗೊಳಿಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ಸುಪ್ರೀಂಕೋರ್ಟ್ ತೀರ್ಪನ್ನು ಪೂರ್ತಿ ಗ್ರಹಿಸಲಾಗುತ್ತದೆ ಎಂದು ಶಬರಿಮಲೆ ಮುಖ್ಯ ಅರ್ಚಕ ಕಂದಾರರು ರಾಜೀವರು ಹೇಳಿದ್ದಾರೆ.

Translate »