ಪರಿಶಿಷ್ಟರಿಗೆ ಮೀಸಲಾದ ಹಣ ಸಕಾಲದಲ್ಲಿ ಖರ್ಚು ಮಾಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದಾವೆ
ಮೈಸೂರು

ಪರಿಶಿಷ್ಟರಿಗೆ ಮೀಸಲಾದ ಹಣ ಸಕಾಲದಲ್ಲಿ ಖರ್ಚು ಮಾಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದಾವೆ

September 29, 2018

ಬೆಂಗಳೂರು:  ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ನಿಗದಿ ಪಡಿಸಿರುವ ಹಣವನ್ನು ಸಕಾಲದಲ್ಲಿ ವೆಚ್ಚ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ದಾವೆ ಹೂಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಎಚ್ಚರಿಸಿದ್ದಾರೆ.

ರಾಜ್ಯ ಅನುಸೂಚಿತ ಜಾತಿಗಳು ಮತ್ತು ಪಂಗಡಗಳ ಅಭಿವೃದ್ಧಿ ಕುರಿತು ನಡೆದ ರಾಜ್ಯ ಪರಿಷತ್ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಗದ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 29,000 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಕಳೆದ ವರ್ಷಕ್ಕಿಂತ ಇದು 2,000 ಕೋಟಿ ರೂ. ಹೆಚ್ಚಿದ್ದು, ನಿಗದಿಪಡಿಸಿರುವ ಹಣದ ವೆಚ್ಚಕ್ಕೆ ನವೆಂಬರ್ ಅಂತ್ಯದ ವೇಳೆಗೆ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಚಾಲನೆ ನೀಡದಿದ್ದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಎಸ್‍ಐಟಿ ಕಾಯಿದೆ 2013ಕ್ಕೆ ತಿದ್ದುಪಡಿ ತಂದ ಸಂದರ್ಭದಲ್ಲೇ ಈ ಯೋಜನೆಗೆ ಮೀಸಲಿರಿಸಿದ ಹಣವನ್ನು ಆಯಾ ವರ್ಷದಲ್ಲೇ ವೆಚ್ಚ ಮಾಡಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಬೇಕೆಂಬ ಕಾನೂನು ಸಹ ಕಾಯಿದೆಯಲ್ಲೇ ಇದೆ. ಕಳೆದ ಎರಡು-ಮೂರು ವರ್ಷಗಳಿಂದ ಹಣ ವೆಚ್ಚ ಮಾಡದೆ ಉಳಿಸಿಕೊಂಡಿದ್ದೀರಿ. ಇಷ್ಟಾದರೂ ನಿಮಗೆ ಶಿಕ್ಷೆಯಾಗಿಲ್ಲ. ನಾನು ಇದನ್ನು ಸಹಿಸುವು ದಿಲ್ಲ, ನಿಮಗೆ ನೀಡಿರುವ ಗಡುವಿನಲ್ಲಿ ಯೋಜನೆ ರೂಪಿಸಿ, ಹಣ ವೆಚ್ಚ ಮಾಡದಿ ದ್ದರೆ ಕಾಯಿದೆ ನಿಮ್ಮ ಪಾಲಿಗೆ ಸಿಂಹ ಸ್ವಪ್ನ ವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇದನ್ನರಿತು, ಶಿಕ್ಷೆಗೆ ಒಳಪಡದೆ, ಆಯಾ ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಯೋಜನೆಗಳ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಬೇಕು ಎಂದು ಕಿವಿಮಾತು ಹೇಳಿದರು. ಯೋಜನೆಗಳ ಅನುಷ್ಠಾನದಲ್ಲಿ ಹಣ ದುರ್ಬಳಕೆಗೆ ಅವಕಾಶ ನೀಡದೆ, ಸರ್ಕಾರದ ಯೋಜನೆ ಗಳನ್ನು ಅರ್ಹ ಫಲಾನುಭವಿಗೆ ತಲುಪಿಸಬೇಕು. ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ. ರಾಜ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವಲ್ಲಿ ಅಧಿಕಾರಿಗಳು ಸಹಕರಿಸಬೇಕು, ಯೋಜನೆಗಳ ಅನುಷ್ಠಾನದಲ್ಲಿನ ನ್ಯೂನತೆಗಳನ್ನು ನೀಡಲಾಗಿರುವ ಸೂಚನೆಗಳ ಅನುಸಾರವಾಗಿ ಸರಿಪಡಿಸಬೇಕು ಎಂದು ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸಮಾಜ ಕಲ್ಯಾಣ ಸಚಿವರತ್ತ ತಿರುಗಿ, ಈಗಾಗಲೇ ಇವರು ಫಲಾನುಭವಿಗಳ ಆಯ್ಕೆ, ಹೊಸ ಕಾರ್ಯಕ್ರಮ ಅನುಷ್ಟಾನ ಸೇರಿದಂತೆ ಕಾರ್ಯಸೂಚಿ ಸಿದ್ಧಪಡಿಸಿದ್ದಾರೆ. ಇದುವರೆಗೂ ಅದೂ ಇರಲಿಲ್ಲ, ಕಾರ್ಯಸೂಚಿ ಬಳಕೆ ಮಾಡಿ ಅಧಿಕಾರಿಗಳು ಯೋಜನಾ ಅನುಷ್ಟಾನಕ್ಕೆ ಮುಂದಾಗಬೇಕು. ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಮೈತ್ರಿ ಸರ್ಕಾರ ಮುಂಗಡಪತ್ರದಲ್ಲಿ ಪ್ರಕಟಿಸಿದ 460 ಯೋಜನೆಗಳ ಪೈಕಿ ಈಗಾಗಲೇ 230 ಕಾರ್ಯಕ್ರಮಗಳಿಗೆ ಆದೇಶ ಹೊರಡಿಸಿದ್ದು, ಅವು ಅನುಷ್ಠಾನ ರೂಪದಲ್ಲಿವೆ. ಇಷ್ಟಾದರೂ ಪ್ರತಿಪಕ್ಷ ಬಿಜೆಪಿ ಸದಸ್ಯರು ಮಾಹಿತಿಯ ಅರಿವಿಲ್ಲದೆ, ಸಾರ್ವಜನಿಕರ ದಿಕ್ಕು ತಪ್ಪಿಸಲು ಸರ್ಕಾರ ಟೇಕಾಫ್ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಹಣಕಾಸು ಇಲಾಖೆಯಲ್ಲಿ 117 ಕಾರ್ಯಕ್ರಮ ಗಳು, 18 ಸಂಪುಟದ ಮುಂದಿದ್ದು, ಇನ್ನು 15 ಯೋಜನೆಗಳ ಪ್ರಕಟಣೆ ಬಾಕಿ ಉಳಿದಿವೆ. ದಾಖಲೆ ಸಮೇತ ವಿವರ ನೀಡಿದ್ದೇನೆ. ಈಗ ನೀವೇ ಹೇಳಿ, ನಮ್ಮ ಸರ್ಕಾರ ಟೇಕಾಫ್ ಆಗಿದೆಯೋ ಇಲ್ಲವೋ, ನಾವುಗಳು ಸರ್ಕಾರದ ಮಟ್ಟದಲ್ಲಿ ಏನು ಮಾಡಬೇಕೋ ಅದನ್ನು ನಿಮ್ಮ ಕಿರುಕುಳಗಳ ನಡುವೆಯೂ ಮಾಡುತ್ತಿದ್ದೇವೆ ಎಂದರು.

Translate »