ಸಿದ್ದರಾಮಯ್ಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ
ಮೈಸೂರು

ಸಿದ್ದರಾಮಯ್ಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ

December 30, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಅವರ ಆಪ್ತ ವಲಯದ ಸಚಿವರುಗಳಾದ ಕೆ.ಜೆ. ಜಾರ್ಜ್, ಕೃಷ್ಣಬೈರೇ ಗೌಡ, ಜಮೀರ್ ಅಹಮದ್ ಖಾನ್ ಸೇರಿ ದಂತೆ ಕೆಲವು ಮಂತ್ರಿಗಳ ನಿಯೋಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದೆ.

ಆದರೆ ಸ್ವತಃ ಸಿದ್ದರಾಮಯ್ಯ, ಸರ್ಕಾರಕ್ಕಾಗಲೀ, ಮುಖ್ಯಮಂತ್ರಿ ಅವರಿಗಾಗಲೀ ತಮಗೆ ಸ್ಥಾನಮಾನ ಕೋರಿ ಪತ್ರವನ್ನೂ ಬರೆದಿಲ್ಲ, ಮೌಖಿಕವಾಗಿಯೂ ಮನವಿ ಮಾಡಿಲ್ಲ.

ಸಚಿವ ಜಾರ್ಜ್ ಮಾತ್ರ ಪದೇ ಪದೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸೂಕ್ತ ಸ್ಥಾನಮಾನಕ್ಕೆ ಒತ್ತಾಯ ಮಾಡಿರುವುದಲ್ಲದೆ, ಅವರು ಸಿಎಲ್‍ಪಿ ನಾಯಕರಾಗಿರುವುದರಿಂದ ಸಚಿವ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಮುಂದೆಯೂ ಸೂಕ್ತ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಆಗಿದ್ದ ಸಂದರ್ಭ ದಲ್ಲಿ ಅವರು ವಾಸಿಸುತ್ತಿದ್ದ ಕಾವೇರಿ ನಿವಾಸದಲ್ಲಿ ಮುಂದುವರೆಯಲು ಅನುಮತಿ ನೀಡಬೇಕು ಎಂದಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಅವರಿಗೆ ಬೆದರಿಕೆ ಇದೆ ಎಂದರೆ ಯಾವ ಶ್ರೇಣಿಯ ರಕ್ಷಣೆ ನೀಡಬೇಕೋ ಅದನ್ನು ನೀಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಿಗೆ ರಕ್ಷಣೆ ಮತ್ತು ಬೆಂಗಾವಲು ಈಗಾಗಲೇ ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಬಂದೋಬಸ್ತ್ ಬೇಕೆಂದರೆ ಅದನ್ನೂ ನೀಡಲಾಗುವುದು, ಆದರೆ ಅವರು ಅಧಿಕೃತವಾಗಿ ಸರ್ಕಾರದ ಗಮನಕ್ಕೆ ತರಬೇಕು. ಇದೇ ಉದ್ದೇಶಕ್ಕೆ ಕಾವೇರಿ ನಿವಾಸದಲ್ಲೇ ಮುಂದು ವರೆಯಲು ಡಿಪಿಆರ್ ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕಾರಣಕ್ಕಾಗಿಯೇ ಆ ಮನೆಯನ್ನು ನಿಮಗೆ ಮಂಜೂರು ಮಾಡಲಾಗಿದೆ ಎಂದು ಜಾರ್ಜ್ ಅವರಿಗೆ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಎಂದ ಮಾತ್ರಕ್ಕೆ ಅವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಒಂದು ವೇಳೆ ನಾನು ನೀಡಿದರೆ ಅವರು ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಇಂತಹುದೇ ಸಂಕಟಕ್ಕೆ ಸಿಲುಕಿದ್ದನ್ನು ಕುಮಾರಸ್ವಾಮಿ ಅವರು ಜಾರ್ಜ್ ಅವರ ಗಮನಕ್ಕೆ ತಂದಿದ್ದಾರೆ. ರಾಷ್ಟ್ರದ ಯಾವುದೇ ಭಾಗದಲ್ಲಿ ಇಂತಹ ಹುದ್ದೆಗೆ ಸಂಪುಟದ ಸ್ಥಾನಮಾನ ನೀಡಬಹುದೆಂಬ ನಿದರ್ಶನವಿದ್ದರೆ, ಅದರ ಆದೇಶದ ಪ್ರತಿ ಕೊಟ್ಟು ಬಿಡಿ ಸಾಕು ಎಂದು ಮುಖ್ಯಮಂತ್ರಿ ಹೇಳಿದ್ದಕ್ಕೆ, ಜಾರ್ಜ್ ಕನಿಷ್ಠ ಕಾವೇರಿ ನಿವಾಸದಲ್ಲಾದರೂ ಮುಂದುವರೆಯಲು ಅವಕಾಶ ನೀಡಿ ಎಂದು ಕೋರಿದ್ದಾರೆ.

ಸಂಪುಟ ಸ್ಥಾನಮಾನ ನೀಡಿದರೆ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ಬಂಗಲೆ, ಕಾರು, ಶಿಷ್ಟಾಚಾರದ ಸವಲತ್ತುಗಳು ಹಾಗೂ ವಿಧಾನಸೌಧದಲ್ಲಿ ಕೊಠಡಿಯೂ ದೊರೆಯುತ್ತದೆ. ಇತ್ತೀಚೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು, ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ವಾಸಿಸಲು ಇಚ್ಛಿಸುವುದಿಲ್ಲ. ಅಲ್ಲಿ ವಾಸಿಸಿದವರು, ಮತ್ತೆ ತಮ್ಮ ಹುದ್ದೆಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ, ಮುಂದಿನ ಚುನಾವಣೆಯಲ್ಲಿ ವಿಧಾನಸೌಧವನ್ನೂ ಪ್ರವೇಶಿಸಲು ಆಗಲಿಲ್ಲ. ಜ್ಯೋತಿಷ್ಯ ಮತ್ತು ಶಾಸ್ತ್ರಗಳಲ್ಲಿ ನಂಬಿಕೆ ಇಲ್ಲದ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಾದಾಗ ಅಧಿಕೃತ ನಿವಾಸದಲ್ಲೇ ವಾಸ್ತವ್ಯ ಮಾಡಿದರಲ್ಲದೆ, ಐದು ವರ್ಷ ಅಧಿಕಾರ ಪೂರೈಸಿದರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕಿಂತ ಹೆಚ್ಚು ಸ್ಥಾನ ಗಳಿಸಿದರೂ ಮುಖ್ಯಮಂತ್ರಿ ಅಧಿಕಾರ ಧಕ್ಕಲಿಲ್ಲ. ಅಷ್ಟೇ ಅಲ್ಲ, ತಮ್ಮ ಸ್ವಂತ ವಿಧಾನಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಲಾಗಲಿಲ್ಲ. ಬಾದಾಮಿ ಯಲ್ಲೂ ಅದೃಷ್ಟವಶಾತ್ ಅಲ್ಪ ಮತದಿಂದ ವಿಧಾನಸಭೆ ಪ್ರವೇಶಿಸಬೇಕಾಯಿತು.

Translate »