ಮೈಸೂರು: ಕನ್ನಡ ನಾಡು-ನುಡಿ ಕಟ್ಟಲು ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಸಾಲುಗಳುಳ್ಳ ಫಲಕಗಳನ್ನು ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುವ ಯೋಜನೆ ಉದ್ದೇಶಿಸಲಾಗಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರಕಟಿಸಿದರು.
ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕುವೆಂಪು ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ವಿಶ್ವ ಮಾನವ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
ಕೊಲ್ಕತ್ತಾ ನಗರದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ ಕಾವ್ಯದ ಸಾಲುಗಳ ಫಲಕಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರು ನಗರದ ಮುಖ್ಯ ಸ್ಥಳಗಳಲ್ಲಿ ಕುವೆಂಪು ಅವರ ಸಾಹಿತ್ಯದ ಸಾಲುಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಕನ್ನಡದ ಬಗ್ಗೆ ಅಪಾರವಾದ ಕಳಕಳಿ ಹಾಗೂ ಗೌರವ ಹೊಂದಿದ್ದ ರಸಋಷಿ ಕುವೆಂಪು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ನಾಡಗೀತೆ, ರೈತಗೀತೆ ರಚಿಸುವ ಮೂಲಕ ನಾಡು-ನುಡಿ ಹಾಗೂ ರೈತನ ಬಗೆಗಿನ ತಮ್ಮ ಗೌರವ ವ್ಯಕ್ತಪಡಿಸಿದ್ದಾರೆ. ಅವರ ವೈಚಾರಿಕ ಪ್ರಜ್ಞೆಯನ್ನು ಪ್ರತಿಯೊಬ್ಬರು ಅವಲೋಕಿಸಬೇಕು ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಕುವೆಂಪು ಅವರು ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಪ್ರವಾದಿ. ಅವರ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಎಂಬ ಪಂಚಮಂತ್ರವನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು. ಜೊತೆಗೆ ಅವರು ನೀಡಿದ ಸಪ್ತಸೂತ್ರಗಳನ್ನು ಪಾಲಿಸುವ ಮೂಲಕ ವರ್ಣಾಶ್ರಮವನ್ನು ನಿರಾಕರಿಸಬೇಕು ಎಂದು ತಿಳಿಸಿದರು.
ಕುವೆಂಪು ಅವರಲ್ಲಿದ್ದ ವಿಶ್ವ ಪ್ರಜ್ಞೆ ಕನ್ನಡದ ಮೂಲಕ ಅನಾವರಣಗೊಂಡಿದೆ. ವೈಜ್ಞಾನಿಕ ಚಿಂತನೆಗಳ ಮಹಾನ್ ಚೇತನರಾದ ಕುವೆಂಪು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಯುಗವನ್ನು ನಿರ್ಮಿಸಿದ ಯುಗದ ಕವಿ. ಅವರ `ಶ್ರೀರಾಮಾಯಣ ದರ್ಶನಂ’ ಜಾತ್ಯತೀತ ಚಿಂತನೆ ಪ್ರತಿಪಾದಿಸುವ ಮಹಾಕಾವ್ಯ. ವೈಚಾರಿಕ ಚಿಂತನೆಯ ಸಾಕ್ಷಿಪ್ರಜ್ಞೆಯಂತಿದ್ದ ಅವರು ನಿಸರ್ಗ ಪ್ರೀತಿ ಹಾಗೂ ಜೀವನೋತ್ಸಾಹವನ್ನು ತಮ್ಮ ಸಾಹಿತ್ಯದಲ್ಲಿ ಅನಾ ವರಣಗೊಳಿಸಿದ್ದಾರೆ ಎಂದರು.
ಜನಸಾಮಾನ್ಯರ ಬಗೆಗೆ ಅತೀವ ಕಳಕಳಿ ಹೊಂದಿದ್ದ ಕುವೆಂಪು ಆ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದರು. ಅವರ ಸಾಹಿತ್ಯ ಸಾಮಾನ್ಯ ಜನತೆಯನ್ನು ಕೇಂದ್ರೀಕರಿಸಿದೆ. ರೈತ ಸಮುದಾಯದ ಶ್ರಮದ ಮಹತ್ವ ಸಾರುವ ಹಿನ್ನೆಲೆಯಲ್ಲಿ ನೇಗಿಲಯೋಗಿ ಎಂದು ಬಣ್ಣಿಸಿದ್ದಾರೆ ಎಂದು ಭೈರವಮೂರ್ತಿ ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕುವೆಂಪು ಅವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯವರಾದರೂ ಮೈಸೂರು ಅವರ ಜೀವನದ ಪ್ರಮುಖ ಘಟ್ಟಗಳಿಗೆ ಸಾಕ್ಷಿಯಾಗಿದೆ. ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ ಅವರು ಮೈಸೂರು ವಿವಿಯ ಕುಲಪತಿ ಆಗಿಯೂ ಶೈಕ್ಷಣಿಕ ಕ್ರಾಂತಿ ಮಾಡಿದರು. ಪ್ರಾಕೃತಿಕ ಸೌಂದರ್ಯದ ಒಡಲಿನ ಮೈಸೂರು ವಿವಿ ಆವರಣಕ್ಕೆ ಮಾನಸ ಗಂಗೋತ್ರಿ ಎಂದು ನಾಮಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ನುಡಿದರು.
ಸಾಹಿತ್ಯ ಲೋಕದ ಮಹಾಪರ್ವತ: ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊಟ್ಟಮೊದಲ ಕವಿಯಾದ ಕುವೆಂಪು ಅವರಿಗೆ ಸಾಲು ಸಾಲು ಪ್ರಶಸ್ತಿಗಳು ಸಂದಿವೆ. ಕುವೆಂಪು ಅವರನ್ನು ದ.ರಾ.ಬೇಂದ್ರೆ `ಮಹಾಕವಿ’ ಎಂದು ಬಣ್ಣಿಸಿದ್ದಾರೆ. ನಾಡಗೀತೆ ಹಾಗೂ ರೈತಗೀತೆ ನೀಡಿದ ಶ್ರೇಯಸ್ಸು ಕುವೆಂಪು ಅವರಿಗೆ ಸಲ್ಲುತ್ತದೆ. ಅವರು ಸಾಹಿತ್ಯ ಲೋಕದ ಮಹಾ ಪರ್ವತ ಎಂದು ಎಲ್.ನಾಗೇಂದ್ರ ಹೇಳಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಸಮಾಜ ಸೇವಕ ರಘುರಾಮಯ್ಯ, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಂ.ಬಿ.ವಿಶ್ವನಾಥ್, ವಿಶ್ವಮಾನವ ವಿದ್ಯಾರ್ಥಿ ವೇದಿಕೆ ಸಂಸ್ಥಾಪಕ ಸುರೇಶ್‍ಗೌಡ, ಕನ್ನಡಪರ ಹೋರಾಟಗಾರರಾದ ಶಿವಶಂಕರ್, ನಾಗರಾಜು ಮತ್ತಿತರರು ಹಾಜರಿದ್ದರು.