ರೌಡಿಶೀಟರ್‍ಗಳ ಮನೆಗಳಲ್ಲಿ ಪೊಲೀಸರ ಪರಿಶೀಲನೆ
ಮೈಸೂರು

ರೌಡಿಶೀಟರ್‍ಗಳ ಮನೆಗಳಲ್ಲಿ ಪೊಲೀಸರ ಪರಿಶೀಲನೆ

December 30, 2018

ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ನಗರದಾದ್ಯಂತ ಹೋಟೆಲ್, ಲಾಡ್ಜ್‍ಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಇಂದು ಬೆಳ್ಳಂಬೆಳಿಗ್ಗೆ ರೌಡಿಶೀಟರ್‍ಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಸಮಾಜಘಾತಕ ಚಟುವಟಿಕೆಗಳು ಹಾಗೂ ಕಾನೂನು-ಸುವ್ಯವಸ್ಥೆಗೆ ಭಂಗವಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ದೇವರಾಜ, ಎನ್‍ಆರ್ ಹಾಗೂ ಕೆಆರ್ ಉಪ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳು ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ನಡೆಸಿ ರೌಡಿಶೀಟರ್‍ಗಳ ಚಟುವಟಿಕೆಗಳನ್ನು ಅವಲೋಕಿಸಿದರು.

ಮೈಸೂರಿನ ಪಡುವಾರಹಳ್ಳಿಯ 1ರಿಂದ 6ನೇ ಮೇನ್‍ವರೆಗೆ ಕಾರ್ಯಾಚರಣೆ ನಡೆಸಿದ ಜಯಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಪ್ರಕಾಶ ಹಾಗೂ ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್ ಗುರುಪ್ರಸಾದ್ ನೇತೃತ್ವದ ಎರಡು ತಂಡಗಳು, ರೌಡಿಶೀಟರ್‍ಗಳ ಮನೆಗಳಲ್ಲಿ ಆಯುಧಗಳು, ಶಸ್ತ್ರಾಸ್ತ್ರಗಳಿಗಾಗಿ ತಪಾಸಣೆ ನಡೆಸಿದರು.

ರೌಡಿಶೀಟರ್‍ಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿ ದ್ದಾರೆಯೇ, ಬೆಳಿಗ್ಗೆಯಿಂದ ಸಂಜೆವರೆಗೆ ಅವರ ಕಾರ್ಯ ಕ್ಷೇತ್ರಗಳಾವುವು ಎಂಬು ದರ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡರು. ಹೊಸ ವರ್ಷಾಚರಣೆಯ ಸಂತೋಷ ಕೂಟಗಳು, ಭೂ ವ್ಯಾಜ್ಯ, ರಿಯಲ್ ಎಸ್ಟೇಟ್ ದಂಧೆಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಕಂಡುಬಂದಲ್ಲಿ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ದಾಳಿ ವೇಳೆ ರೌಡಿಶೀಟರ್‍ಗಳಿಗೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಮೊಹಲ್ಲಾಗಳ ಸ್ಥಳೀಯರಿಂದ ರೌಡಿಶೀಟರ್‍ಗಳ ಚಲನವಲನಗಳ ಬಗ್ಗೆ ಗುಪ್ತವಾಗಿ ಮಾಹಿತಿ ಕಲೆ ಹಾಕಿ, ಒಂದು ವೇಳೆ ಅವರು ದುಷ್ಕೃತ್ಯಗಳಲ್ಲಿ ಭಾಗವಹಿಸಿರುವುದು ತಿಳಿದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಮೊಹಲ್ಲಾ ಬೀಟ್ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಹೇಳಿದ್ದಾರೆ. ಅದೇ ರೀತಿ ಆಲನಹಳ್ಳಿ, ನಜರ್‍ಬಾದ್, ಕೆಆರ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲೂ ರೌಡಿಶೀಟರ್‍ಗಳ ಮನೆಗೆ ದಾಳಿ ನಡೆಸಿ ಎಚ್ಚರಿಕೆ ನೀಡಿದರು. ಪೂರ್ವಭಾವಿಯಾಗಿ ಕೋರ್ಟಿನಿಂದ ಸರ್ಚ್ ವಾರಂಟ್ ಪಡೆದು ಪೊಲೀಸರು ತಪಾಸಣೆ ನಡೆಸಿದರು.

Translate »