ರಾಗಿ ಕ್ವಿಂಟಾಲ್ 2897ರೂ. ಜ.1ರಿಂದ ಖರೀದಿ ಕೇಂದ್ರ
ಮೈಸೂರು

ರಾಗಿ ಕ್ವಿಂಟಾಲ್ 2897ರೂ. ಜ.1ರಿಂದ ಖರೀದಿ ಕೇಂದ್ರ

December 30, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜ.1ರಿಂದ ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು, ಮಾ.31ರವರೆಗೆ ರೈತರು ಕ್ವಿಂಟಾಲ್‍ಗೆ 2897 ರೂ. ದರಕ್ಕೆ ರಾಗಿ ಮಾರಾಟ ಮಾಡಬಹುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಎಂ.ಶಿವಣ್ಣ ತಿಳಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗ ಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆ ಯಾದ್ಯಂತ ರಾಗಿ ಬೆಳೆ ಉತ್ತಮವಾಗಿದೆ. ಒಟ್ಟು 30,989 ಹೆಕ್ಟೇರ್ ಪ್ರದೇಶದಲ್ಲಿ 70,369 ಮೆಟ್ರಿಕ್ ಟನ್ ರಾಗಿ ಬೆಳೆ ಬೆಳೆಯಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 12 ಖರೀದಿ ಕೇಂದ್ರವನ್ನು ಜ.1ರಿಂದಲೇ ತೆರೆಯುತ್ತಿದ್ದು, ನೋಂದಣಿ ಮಾಡಿಕೊಂಡ ರೈತರಿಂದ ರಾಗಿ ಖರೀದಿಸಲಾಗುತ್ತದೆ. ರಾಗಿ ಗುಣಮಟ್ಟದ್ದಾಗಿರಬೇಕು. ಅನ್ಯವಸ್ತುಗಳು ಶೇ.1ರಷ್ಟು, ಇತರೆ ಆಹಾರ ಧಾನ್ಯಗಳು ಶೇ.1ರಷ್ಟು, ವಿರೂಪಗೊಂಡ ಧಾನ್ಯಗಳು ಶೇ.1ರಷ್ಟು, ಸ್ವಲ್ಪ ವಿರೂಪಗೊಂಡ ಧಾನ್ಯ ಗಳು ಶೇ.2 ರಷ್ಟು ಮತ್ತು ತೇವಾಂಶ ಶೇ. 12ರಷ್ಟಿರುವ ರಾಗಿಯನ್ನು ಕ್ವಿಂಟಾಲ್‍ಗೆ 2897 ರೂ. ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲಾಗುತ್ತದೆ ಎಂದರು.

ನೋಂದಾಯಿಸಿ ಕೊಂಡ ರೈತರು ರಾಗಿ ಸರಬರಾಜು ಮಾಡುವ ದಿನಾಂಕದ ಬಗ್ಗೆ ಖರೀದಿ ಕೇಂದ್ರದಿಂದ ಸರಬರಾಜು ಚೀಟಿಯನ್ನು ನಮೂನೆ-3ರಲ್ಲಿ ಪಡೆದು, ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ರೈತರಿಂದ ಖರೀದಿಸಿದ ರಾಗಿಯ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೇ ಆರ್‍ಟಿಜಿಎಫ್/ನೆಫ್ಟ್ ಮೂಲಕ ಪಾವತಿಸಲಾಗುವುದು. ರೈತರು ರಾಗಿಯೊಂದಿಗೆ ನೀಡುವ 50 ಕೆಜಿ ಚೀಲವೊಂದಕ್ಕೆ 12 ರೂ. ಪಾವತಿಸಲಾಗುತ್ತದೆ ಎಂದು ಹೇಳಿದರು.

ರೈತರು ಜ.1ರಿಂದ 15ರವರೆಗೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಕಡ್ಡಾಯವಾಗಿ ಆಧಾರ್ ಕಾರ್ಡ್, ಆರ್‍ಟಿಸಿ, ರಾಷ್ಟ್ರೀಕೃತ ಬ್ಯಾಂಕ್ ಖಾತೆ ಸಂಖ್ಯೆ, ಇತ್ತೀಚಿನ ಫೋಟೋ ಮತ್ತು ಐಎಫ್‍ಎಸ್‍ಸಿ ಕೋಡ್ ಹೊಂದಿರುವ ಪಾಸ್‍ಬುಕ್‍ನ ಪ್ರತಿ, ಮೊಬೈಲ್ ಸಂಖ್ಯೆ ರದ್ದುಪಡಿಸಿದ 1 ಚೆಕ್ ಒದಗಿಸಬೇಕು. ಅಲ್ಲದೆ ತಹಸೀಲ್ದಾರ್ ಅಥವಾ ಅವರಿಂದ ಆದೇಶ ಪಡೆದ ಅಧಿಕಾರಿಯಿಂದ ನಮೂನೆ-1ರಲ್ಲಿ ಬೆಳೆ ದೃಢೀಕರಣ ಪತ್ರ ಪಡೆದು ಹಾಜರುಪಡಿಸಬೇಕು ಎಂದು ತಿಳಿಸಿದರು.

Translate »