ಅಧಿಕಾರಕ್ಕೇರುವ ಮುನ್ನ ದೇವರ ಅನುಗ್ರಹ, ಸಿಎಂ ಗದ್ದುಗೆಗೇರಿದ ಮೇಲೆ ಮಠಾಧೀಶರ ಆಶೀರ್ವಾದ!
ಮೈಸೂರು

ಅಧಿಕಾರಕ್ಕೇರುವ ಮುನ್ನ ದೇವರ ಅನುಗ್ರಹ, ಸಿಎಂ ಗದ್ದುಗೆಗೇರಿದ ಮೇಲೆ ಮಠಾಧೀಶರ ಆಶೀರ್ವಾದ!

May 25, 2018

ಬೆಂಗಳೂರು: ಅಧಿಕಾರ ವಹಿಸಿ ಕೊಳ್ಳುವುದಕ್ಕೂ ಮುನ್ನ ರಾಜ್ಯದ ವಿವಿಧ ಶಕ್ತಿ ದೇವತೆಗಳ ಅನುಗ್ರಹ ಪಡೆದ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಯಾದ ನಂತರ ವಿವಿಧ ಮಠಾಧೀಶರ ಆಶೀರ್ವಾದ ಪಡೆದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರು ದಿನವೇ ತುಮಕೂರಿಗೆ ತೆರಳಿ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದು, ಅವರ ಜೊತೆ ಹತ್ತು ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ಇದಕ್ಕೂ ಮುನ್ನ ನಗರದ ಹೊರವಲಯ ದಲ್ಲಿರುವ ಉಳ್ಳಾಳದ ನಂಜಾವಧೂತ ಮಠಕ್ಕೆ ತೆರಳಿದ ಕುಮಾರಸ್ವಾಮಿ, ಶ್ರೀಗಳ ಆಶೀರ್ವಾದ ಪಡೆದರು.

ನಂಜಾವಧೂತ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ ಸಿಎಂ ಕುಮಾರಸ್ವಾಮಿ ಅಲ್ಲಿಯೂ ಕೆಲಹೊತ್ತು ಶ್ರೀಗಳ ಜತೆ ಸಮಾಲೋಚನೆ ನಡೆಸಿದರು. ನಂತರ ವಿಜಯ ನಗರದ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದು ಕೊಂಡರು. ಮಠಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಸಾಲ ಮನ್ನಾ ವಿಚಾರ ದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ಪೂರ್ಣ ಬಹುಮತ ಲಭ್ಯವಾಗದಿರುವುದರಿಂದ ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಸರ್ಕಾರ ರಚಿಸಿದ್ದೇವೆ. ಆ ಪಕ್ಷದ ನಾಯಕರ ವಿಶ್ವಾಸ ಪಡೆದು, ಸಾಲ ಮನ್ನಾ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಬಿಜೆಪಿ ನಾಯಕರು ನಮ್ಮನ್ನ ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕಿಡಿಕಾರಿದರು. ಬಿಜೆಪಿ ನಾಯಕರು ನಮ್ಮ ಮೇಲೆ ಟೀಕೆ ಮಾಡುವುದನ್ನು ಬಿಡಬೇಕು. ಅದರಲ್ಲೇ ಕಾಲ ಕಳೆಯಬಾರದು. ಪ್ರತಿಜ್ಞಾ ವಿಧಿ ಕಾರ್ಯ ಕ್ರಮ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ಅಧಿ ಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದರು.

Translate »