`ಗೋಡ್ಸೆ, ಸಾವರ್ಕರ್ ಚಿಂತನೆಯಲ್ಲಿ ಸರ್ಕಾರ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ’
ಮೈಸೂರು

`ಗೋಡ್ಸೆ, ಸಾವರ್ಕರ್ ಚಿಂತನೆಯಲ್ಲಿ ಸರ್ಕಾರ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ’

February 3, 2020

ಮೈಸೂರಲ್ಲಿ ಬಿವಿಎಸ್ ಆಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಟೀಕೆ

ಮೈಸೂರು, ಫೆ.2(ಪಿಎಂ)- ದೇಶದ ಹಣೆಗೆ ಸಿಎಎ, ಎನ್‍ಆರ್‍ಸಿ ಹಾಗೂ ಎನ್ ಪಿಆರ್ ಹೆಸರಿನಲ್ಲಿ ಮೂರು ನಾಮ ಹಾಕಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು, ಗೋಡ್ಸೆ ಹಾಗೂ ಸಾವರ್ಕರ್ ಚಿಂತನಾ ಕ್ರಮ ದಲ್ಲಿ ದೇಶವನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಟೀಕಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಸಮಾವೇಶ-ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹು ಮಾನ ವಿತರಣಾ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು.

ಪರೋಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರ ಗೋಡ್ಸೆ ತತ್ವ ಅನುಸರಿಸುತ್ತಿದೆ. ನಾಥೂ ರಾಮ್ ಗೋಡ್ಸೆ ಅಂತಹವರ ತತ್ವಗಳು ಇಂದು ದೇಶದಲ್ಲಿ ಜಾರಿಯಾಗುತ್ತಿವೆ. ಇದರ ವಿರುದ್ಧ ಮಾತನಾಡುವವರನ್ನು ಬೆದರಿಕೆಗೆ ಗುರಿ ಮಾಡಲಾಗುತ್ತಿದೆ. ಸಂವಿಧಾನ ಅಂಗೀಕರಿ ಸುವ ಸಂದರ್ಭದಲ್ಲಿ ಇದರಲ್ಲಿ ಮನುಸ್ಮøತಿ ಅಂಶಗಳಿಲ್ಲ ಎಂದು ಸಾವರ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಡಾ.ಅಂಬೇಡ್ಕರ್ ಅವರು ಮನುಸ್ಮøತಿ ಸುಟ್ಟು ಹಾಕಿದ್ದರಲ್ಲದೆ, ಸಂವಿಧಾ ನದ ಮೂಲಕ ತಲೆಕೆಳಗಾಗಿದ್ದ ಭಾರತ ವನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ. ಆದರೆ ಈಗ ಮನುವಾದಿಗಳು ಭಾರತವನ್ನು ಮತ್ತೆ ತಲೆಕೆಳಕಾಗಿ ಮಾಡಲು ಪ್ರಯತ್ನಿಸುತ್ತಿ ದ್ದಾರೆ. ಇದರ ವಿರುದ್ಧ ಹೋರಾಡದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.

ಇಂದು ದೇಶದ ಸಂವಿಧಾನ ರಕ್ಷಣೆಗೆ ಇಡೀ ಭಾರತವೇ ಎದ್ದು ನಿಂತಿದ್ದು, ಸಂವಿ ಧಾನ ನಮ್ಮ ರಕ್ಷಣೆ ಮಾಡಲಿದೆ. ಡಾ. ಅಂಬೇಡ್ಕರ್ ಅವರನ್ನು ದಲಿತ ಸಮುದಾಯ ವೈಚಾರಿಕತೆಯ ದೇವರಾಗಿ ಸ್ಮರಿಸುತ್ತಿದೆ. ಇಂದು ಅವರನ್ನು ಕೇವಲ ದಲಿತರು ಮಾತ್ರ ವಲ್ಲ ಭಾರತದ ಇಡೀ ದೇಶವೇ ಸ್ಮರಿಸು ವಂತಾಗಿದೆ. `ಮುಂದೆ ನೀವೇನಾದರೂ ನನ್ನ ಪೂಜೆ ಮಾಡಿದರೆ ಪುರೋಹಿತರು ಮಧ್ಯಪ್ರವೇಶ ಮಾಡುತ್ತಾರೆ. ಆಗ ನೀವು ದೂರ ನಿಲ್ಲಬೇಕಾಗುತ್ತದೆ. ಆ ಸನ್ನಿವೇಶ ಸೃಷ್ಟಿಸಿಕೊಳ್ಳಬೇಡಿ’ ಎಂದು ಅಂದೇ ಅಂಬೇ ಡ್ಕರ್ ಎಚ್ಚರಿಸಿದ್ದಾರೆ ಎಂದರು.

ಅಂತರ್ಜಾಲ ವಿಕಿಪೀಡಿಯಾದಲ್ಲಿ ಕೆಲ ವರು ಭಾರತದ ಸಂವಿಧಾನವನ್ನು `ಎರ ವಲು ಸಂವಿಧಾನ’ ಎಂದು ಬರೆದಿದ್ದಾರೆ. ಹೀಗೆ ತಪ್ಪು ಮಾಹಿತಿ ನೀಡುವುದು ಮೂರ್ಖ ತನದ ಪರಮಾವಧಿ. ಓದದೇ ಇರುವ ಮುಟ್ಟಾಳರು ಮಾತ್ರವೇ ಸಂವಿಧಾನವನ್ನು ಅಂಬೇಡ್ಕರ್ ಬರೆದರೇ ಎಂದು ಪ್ರಶ್ನಿಸು ತ್ತಾರೆ. ಸಂವಿಧಾನದಲ್ಲಿ ಮಾತೃ ಹೃದಯ ವಿದೆ. ಯಾವ ಮಗುವನ್ನು ಎತ್ತಿಕೊಂಡು ನಡೆಯಬೇಕು, ಯಾವ ಮಗುವನ್ನು ಕೈ ಹಿಡಿದು ನಡೆಸಬೇಕು ಎಂಬುದು ಮಾತೃ ಹೃದಯದ ಸಂವಿಧಾನಕ್ಕೆ ಗೊತ್ತಿದೆ ಎಂದು ವಿಶ್ಲೇಷಿಸಿದರು.

ಇದೇ ಸಂದರ್ಭದಲ್ಲಿ `ನಾವು ಭಾರ ತೀಯರು’ ಧ್ವನಿ ಸುರಳಿ, `ಪ್ರಬುದ್ಧ ಭಾರತ’ ಕ್ಯಾಲೆಂಡರ್ ಹಾಗೂ `ಸಂವಿಧಾನ ಪೀಠಿಕೆ’ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಬಿವಿಎಸ್‍ನ ಸಂಪನ್ಮೂಲ ವ್ಯಕ್ತಿ ಶಿವ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

`ಭಾರತಕ್ಕೆ ಬೇಕಿರುವುದು ಕ್ರಿಯಾತ್ಮಕ ಶಿಕ್ಷಣ, ಸಶಕ್ತ ಉದ್ಯೋಗ, ಸುಭದ್ರ ಆರ್ಥಿ ಕತೆ ಹೊರತು, ಸಿಎಎ ಅಲ್ಲ’ ವಿಷಯ ಕುರಿತು ಸಹಾಯಕ ಪ್ರಾಧ್ಯಾಪಕಿ ಶೈಲಜಾ ಪ್ರಬಂಧ ಮಂಡಿಸಿದರು. ಶಾಸಕ ಎನ್. ಮಹೇಶ್, ಸಿ.ಎಸ್.ದ್ವಾರಕಾನಾಥ್, ನಿವೃತ್ತ ಪ್ರಾಧ್ಯಾಪಕ ನಂಜರಾಜ ಅರಸ್, ಅಂಕಣಕಾರ ಕೆ.ಸಿ.ರಘು, ಪತ್ರಕರ್ತೆ ನಾಜಿಯಾ ಕೌಸರ್, ಬಿವಿಎಸ್ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಹರಿರಾಮ್, ಡಾ.ಜಿ.ಶ್ರೀನಿವಾಸ್ ಮತ್ತಿತರರಿದ್ದರು. ಸಮಾ ವೇಶದಲ್ಲಿ ಭಾರೀ ಜನಸ್ತೋಮವಿತ್ತು.

 

ಸಾಲು ಮರದ ತಿಮ್ಮಕ್ಕನಿಗೆ ಪುರಸ್ಕಾರ

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಾಲು ಮರದ ತಿಮ್ಮಕ್ಕ ಅವರಿಗೆ 1 ಲಕ್ಷ ರೂ. ನಗದು ಹಸ್ತಾಂತರಿಸಿ ಸನ್ಮಾನಿಸಲಾಯಿತು. ಅಲ್ಲದೇ, ಸಂವಿಧಾನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾ ಯಿತು. ಪದವಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮೊಹಮ್ಮದ್ ರಿಯಾಜ್ ಅವರಿಗೆ 1 ಲಕ್ಷ ರೂ. ನಗದು, ಪಿಯು ವಿಭಾಗದಲ್ಲಿ ತುಮಕೂರು ಜಿಲ್ಲೆಯ ಎಲ್.ಚಂದನಾಗೆ 50 ರೂ. ನಗದು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ರಾಮನಗರ ಜಿಲ್ಲೆಯ ಪಿ.ಎಸ್. ಇಬ್ಬನಾಗೆ 25 ಸಾವಿರ ರೂ. ನಗದು ಬಹುಮಾನ ಸಂದಿತು. ರಾಜ್ಯದಿಂದ ಒಟ್ಟು 31,969 ಮಂದಿ ಸ್ಪರ್ಧಿಸಿದ್ದರು. ಮೈಸೂರು ಜಿಲ್ಲೆಯಿಂದ 6,125 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಎಂದು ಇದೇ ವೇಳೆ ಪ್ರಕಟಿಸಲಾಯಿತು.

‘ಸಿಎಎ ಸಿದ್ಧಗೊಂಡಿದ್ದು ಆರ್‍ಎಸ್‍ಎಸ್ ಲ್ಯಾಬ್‍ನಲ್ಲಿ’

ಮೈಸೂರು: ನಾಗ್ಪುರದ ಆರ್‍ಎಸ್‍ಎಸ್ ಲ್ಯಾಬ್‍ನಲ್ಲಿ ಸಿಎಎ, ಎನ್‍ಆರ್‍ಸಿ ಉತ್ಪಾದನೆಗೊಂಡಿದ್ದು, ಬಿಜೆಪಿ ಸರ್ಕಾರ ನಮ್ಮ ಮೇಲೆ ಹೇರಲು ಹೊರಟಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಸಿಎಎ ಹಾಗೂ ಎನ್‍ಆರ್‍ಸಿ ಒಂದಕ್ಕೊಂದು ಸಂಬಂಧ ಹೊಂದಿದ್ದು, ಎರಡೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಎನ್‍ಆರ್‍ಸಿಗೆ ನಾಗರಿಕರ ಜನ್ಮದಿನ, ಅವರ ತಂದೆಯ ಜನ್ಮದಿನ ಸೇರಿದಂತೆ ಹಲವು ದಾಖಲೆ, ಮಾಹಿತಿ ನೀಡಬೇಕಾಗು ತ್ತದೆ. ನನ್ನ ವಯೋಮಾನದವರಲ್ಲಿ ಬಹುತೇಕರಿಗೆ ಹುಟ್ಟಿದದಿನವೇ ಗೊತ್ತಿಲ್ಲ. ಶಾಲೆ ಸೇರುವಾಗ ಹುಟ್ಟಿದ ದಿನಾಂಕಗಳು ನಮಗೆ ಹುಟ್ಟಿಕೊಂಡಿವೆ. ಕಳೆದ ವಾರ ಒಂದು ಕೇಸ್‍ನ ವಿಚಾರವಾಗಿ ಬಾಗಲಕೋಟೆಯಿಂದ ವ್ಯಕ್ತಿಯೊಬ್ಬ ನನ್ನನ್ನು ಭೇಟಿಯಾಗಿದ್ದ. ಆತ ತಂದೆ ಹೆಸರು ಹೇಳು ಎಂದರೆ ತಾಯಿ ಹೆಸರನ್ನೇ ಹೇಳುತ್ತಿದ್ದ. ತಂದೆ ತೀರಿ ಹೋಗಿದ್ದರೂ ಪರವಾಗಿಲ್ಲ. ಅವರ ಹೆಸರು ಹೇಳು ಎಂದಾಗ, ಆತ ದೇವದಾಸಿ ಮಗ ಎಂಬುದು ತಿಳಿಯಿತು. ಹೀಗೆ ತಂದೆಯೇ ಗೊತ್ತಿಲ್ಲದವರು ದಾಖಲೆ ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನಿಸಿದರು.

ದೇಶದಲ್ಲಿ 1.70 ಕೋಟಿ ಜನ ವಸತಿಹೀನರು, 15 ಕೋಟಿ ಅಲೆಮಾರಿಗಳು, 8 ಕೋಟಿ ಆದಿವಾಸಿಗಳಿದ್ದು, ಇವರಲ್ಲಿ ಶೇ.60ರಷ್ಟು ಮಂದಿ ಅವಿದ್ಯಾವಂತರೇ ಇದ್ದಾರೆ. ಇವರೆಲ್ಲಾ ದಾಖಲೆ ನೀಡಲು ಸಾಧ್ಯವೇ? ಇವರು ಶ್ರೀರಾಮನಿಗೆ ದೇವ ಸ್ಥಾನ (ರಾಮಮಂದಿರ) ಕಟ್ಟುತ್ತೇವೆಂದು ನಕಲಿ ಆಟ ಆಡುತ್ತಾರೆ. ಆದರೆ ಅಲೆಮಾರಿ ಸಮುದಾಯ ಅಸಲಿಯಾಗಿ ಊರೂರು ಸುತ್ತಿ ರಾಮನನ್ನು ಮನೆ ಮನೆಗೆ ತಲುಪಿಸು ತ್ತದೆ. ಸಿಎಎ ಪರವಾಗಿ ಮಾತನಾಡುವವರು ಆ ಸಂಬಂಧ ಇರುವ ಪ್ರಶ್ನೋತ್ತರ ವನ್ನೊಮ್ಮೆ ನೋಡಿದರೆ ಅವರಿಗೇ ಗೊತ್ತಾಗುತ್ತದೆ. ಸಂವಿಧಾನದ ನೈತಿಕತೆಯನ್ನೇ ಅಣಕಿಸುವ ಸಿಎಎ, ಎನ್‍ಆರ್‍ಸಿ ಬುದ್ಧ, ಬಸವ, ಪಂಪ, ಕುವೆಂಪು ಆದರ್ಶಗಳಿಗೆ ವಿರುದ್ಧವಾಗಿವೆ. ಹಾಗಾಗಿ ನಾವು ಸ್ವೀಕರಿಸಲ್ಲ ಎಂದರು.

1 ಕೋಟಿ ರೂ. ಬಹುಮಾನ: ಸಂಸದರಿಗೆ ನಿಜವಾಗಿ ಸಂವಿಧಾನದ ಅರಿವು ಬೇಕಿದೆ. ಅವರಿಗೆ ಸಂವಿಧಾನ ಪ್ರಬಂಧ ಸ್ಪರ್ಧೆ ಆಯೋಜಿಸಿದರೆ ಭಿಕ್ಷೆ  ಬೇಡಿಯಾ ದರೂ 1 ಕೋಟಿ ರೂ. ಸಂಗ್ರಹಿಸಿ ಬಹುಮಾನ ಕೊಡುತ್ತೇನೆ. ಸಂಸದರಿಗೆ ಸಂವಿಧಾನ ಅರಿವಿದ್ದಿದ್ದರೆ ಸಿಎಎ ಜಾರಿಗೆ ಬರುತ್ತಿರಲಿಲ್ಲ ಎಂದು ದ್ವಾರಕಾನಾಥ್ ಹೇಳಿದರು.

 

 

 

Translate »