ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು
ಕೊಡಗು

ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು

October 20, 2018

ಗೋಣಿಕೊಪ್ಪಲು:  ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ 2 ಸಂದೇಶದ ಸ್ತಬ್ಧ ಚಿತ್ರಗಳು, ಕನ್ನಡ ಮಾಧ್ಯಮದ ಶಿಕ್ಷಣ ಮಹತ್ವ, ಹಾಗೂ ಕಾನೂನು ಸಡಿಲದಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಎಂಬ ಸಂದೇಶಗಳು ಚಿತ್ರಗಳ ಮೂಲಕ ಅನಾವರಣಗೊಂಡವು.

ಸರಳ ದಸರಾ ಎಂಬ ಕಾರಣಕ್ಕೆ ಬಹುಮಾನ ವಿಲ್ಲದಿದ್ದರೂ ನಾಲ್ಕು ಸ್ತಬ್ದಚಿತ್ರಗಳನ್ನು ಅನಾವರಣ ಗೊಳಿಸುವ ಮೂಲಕ ಸ್ತಬ್ದಚಿತ್ರ ಅಭಿಮಾನಿಗಳಿಗೆ ಒಂದಷ್ಟು ಸಂದೇಶವನ್ನು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ತಬ್ದಚಿತ್ರ ಪ್ರದರ್ಶನದ ಮೂಲಕ ಸಾರಲಾಯಿತು.

ಭಗತ್‍ಸಿಂಗ್ ಸ್ವಸಹಾಯ ಸಂಘದ ಪ್ರಾಕೃತಿಕ ವಿಕೋಪದಿಂದ ನಡೆದ ಅನಾಹುತದಿಂದಾದ ಸಾವು-ನೋವುಗಳನ್ನು ಬಿತ್ತರಿಸುವ ಮೂಲಕ ‘ಕಾವೇರಿ ಮುನಿದಳು’ ಎಂಬ ಸಂದೇಶ ಸಾರಿದರು. ಜೋಡುಪಾಲದಲ್ಲಿ ಭೂಕುಸಿತದಿಂದ ಸಮಾದಿ ಯಾದ 15 ರ ಬಾಲೆ ಕುಡಿಯರ ಮಂಜುಳ ಅವರ ದೇಹದ ಚಿತ್ರವನ್ನು ಗೋಣಿಕೊಪ್ಪ ಯುವಶಕ್ತಿ ತಂಡ ಅನಾವರ ಣಗೊಳಿಸಿತು.

ಗೋಣಿಕೊಪ್ಪದ ಸರ್ವ ತಂಡವು ‘ಶಿಕ್ಷಣ ಮಾರಾಟಕಿಲ್ಲ’ ಎಂಬ ಸಂದೇಶ ಸಾರಿದರು. ಶಾರದಾಂಭ ದಸರಾ ಸಮಿತಿ ವತಿಯಿಂದ ಕಾನೂನು ಸಡಿಲ ದಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣ ಎಂಬ ಸಂದೇಶ ನೀಡಲಾಯಿತು. ಸರಳ ದಸರಾ ಎಂಬ ಕಾರಣಕ್ಕೆ ಕಳೆದ 27ವರ್ಷದಿಂದ ಸ್ತಬ್ದಚಿತ್ರ ಅನಾವರಣಕ್ಕೆ ಅವಕಾಶ ಮಾಡಿಕೊಡುತ್ತಿದ್ದ ದಸರಾ ನಾಡ ಹಬ್ಬ ಸಮಿತಿ ಈ ಬಾರಿ ಚಿತ್ರ ಪೈಪೋಟಿ ಇಲ್ಲ ಎಂದು ಘೋಷಿಸಿತ್ತು. ಆದರೆ, ಸ್ತಬ್ದಚಿತ್ರ ನಿರ್ಮಿಸುವ ತಂಡಗಳ ಒತ್ತಾಯದಂತೆ ಆಯೋಜಿಸಲಾಗಿತ್ತು.

ಚೆಕ್ ಹಿಂತಿರುಗಿಸಿದ ಸ್ತಬ್ದಚಿತ್ರ ಆಯೋಜಕರ ಸಮಿತಿ: ಸರಳ ದಸರಾ ಎಂಬ ಕಾರಣಕ್ಕೆ ಸ್ತಬ್ದಚಿತ್ರ ಪೈಪೋಟಿ ಯಲ್ಲ, ಪ್ರದರ್ಶನಕ್ಕೆ ಮಾತ್ರ ಅವಕಾಶ ಎಂದು ಸ್ತಬ್ದಚಿತ್ರ ಆಯೋಜಿಸುತ್ತಾ ಬಂದಿರುವ ನಾಡಹಬ್ಬ ದಸರಾ ಸಮಿತಿ ಘೋಷಿಸಿತ್ತು. ಇದರಂತೆ ಚಿತ್ರ ಸ್ಪರ್ಧಿಗಳು ಕೂಡ ಸಿದ್ದತೆ ಮಾಡಿಕೊಂಡು ಪಾಲ್ಗೊಂಡಿವೆ. ಆದರೆ, ಗೋಣಿಕೊಪ್ಪ ದಸರಾ ಆಚರಣೆಯ ಮಾತೃ ಸಂಸ್ಥೆಯಾಗಿರುವ ಕಾವೇರಿ ದಸರಾ ಸಮಿತಿಯು ಚಿತ್ರ ಮೆರವಣಿಗೆ ಮಧ್ಯಾಹ್ನ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡುವಂತೆ ದಸರಾ ನಾಡಹಬ್ಬ ಸಮಿತಿಗೆ ರೂ. 22.500 ಹಣ ನೀಡಿ ಒತ್ತಡ ಹೇರಿದೆ. ನಾವು ಪೈಪೋಟಿ ಅಲ್ಲ ಎಂದು ಘೋಷಿಸಿದ ಮೇಲೆ ಬಹುಮಾನ ನೀಡಲು ಆಗುವುದಿಲ್ಲ ಎಂದು ನಾಡಹಬ್ಬ ಸಮಿತಿ ಹಣವನ್ನು ಸಮಿತಿಗೆ ಹಿಂತಿರುಗಿಸಿದೆ. ಚಿತ್ರ ಪ್ರದರ್ಶನ ಮಾಡಿದ ತಂಡಕ್ಕೂ ಕಾವೇರಿ ದಸರಾ ಸಮಿತಿ ಬಹುಮಾನಕ್ಕೆ ಹಣ ನೀಡಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಚಿತ್ರ ಆಯೋಜಕರು ಹಾಗೂ ಪ್ರದರ್ಶನ ತಂಡದ ನಡುವೆ ಗೊಂದಲು ಸೃಷ್ಠಿಸಿತು. ಆದರೆ, ಪೂರ್ವ ನಿಗದಿಯಂತೆ ಬಹುಮಾನ ನೀಡಲಾಗುವುದಿಲ್ಲ ಎಂದು ಆಯೋಜಕ ನಾಡಹಬ್ಬ ಸಮಿತಿ ಚೆಕ್ ವಾಪಸ್ ನೀಡಿ, ಪ್ರದರ್ಶನ ನೀಡಿದ 4 ತಂಡಗಳಿಗೆ ತಲಾ 3 ಸಾವಿರ ಪ್ರೋತ್ಸಾಹಕರ ಬಹುಮಾನ ನೀಡಿ ಗೊಂದಲಕ್ಕೆ ತೆರೆ ಎಳೆದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಮೆರವಣಿಗೆ ಆರಂಭವಾಯಿತು. ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಚಾಲನೆ ನೀಡಿದರು. ಈ ಸಂದರ್ಭ ವೃತ್ತ ನಿರೀಕ್ಷಕ ದಿವಾಕರ್, ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಕಾವೇರಪ್ಪ. ಕಾರ್ಯದರ್ಶಿ ಕಂಜಿತಂಡ ಪ್ರವೀಣ್, ಪ್ರಮುಖರುಗಳು ಉಪಸ್ಥಿತರಿದ್ದರು. ಉಮಾಮಹೇಶ್ವರಿ ದೇವಾಲಯ ಆವರಣದವರೆಗೆ ಮೆರವಣಿಗೆ ನಡೆಯಿತು.

Translate »