ಮಡಿಕೇರಿಯಲ್ಲಿ ಶೂಟೌಟ್: ಇಬ್ಬರಿಗೆ ಗಾಯ,ಓರ್ವನ ಬಂಧನ
ಕೊಡಗು

ಮಡಿಕೇರಿಯಲ್ಲಿ ಶೂಟೌಟ್: ಇಬ್ಬರಿಗೆ ಗಾಯ,ಓರ್ವನ ಬಂಧನ

October 20, 2018

ಮಡಿಕೇರಿ: ಆಯುಧ ಪೂಜೆಯ ರಾತ್ರಿ ಮಡಿಕೇರಿ ನಗರದ ಹೃದಯ ಭಾಗ ದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಇಬ್ಬರು ಯುವಕರ ಕಾಲುಗಳಿಗೆ ಗುಂಡು ಹೊಕ್ಕಿದೆ. ನಗರದ ಮಾರ್ಕೇಟ್ ಆವರಣದ ಕಾವೇರಿ ಬಾರ್ ಮುಂಭಾಗ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮತ್ತೋರ್ವ ಶಂಕಿತ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಘಟನೆ ವಿವರ: ಮಾರ್ಕೇಟ್ ಸಮೀಪದ ಕಾವೇರಿ ಬಾರ್‌ನ ಮುಂಭಾಗ ರಿಯಾಜ್ (31) ಮತ್ತು ಸಮೀಮ್(21) ಎಂಬ ಯುವಕರು ಕ್ಯಾಂಟೀನ್ ನಡೆಸುತ್ತಿದ್ದರು. ಆಯುಧ ಪೂಜೆ ದಿನದ ರಾತ್ರಿ 9.30ರ ಸಮಯದಲ್ಲಿ ಕಾವೇರಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಕೆಲವರು ಕ್ಯಾಂಟೀನ್‍ನಿಂದ “ಎಗ್‍ರೋಲ್” ಖರೀದಿಸಿ ಬಾರ್‌ಗೆ ಬಂದಿದ್ದಾರೆ. ಆ ಬಳಿಕ ಮತ್ತೇ ಕ್ಯಾಂಟೀನ್ ತೆರಳಿ ಗೋಬಿಮಂಚೂರಿ ಖರೀದಿಸಿ ತಿಂದಿದ್ದಾರೆ. ಈ ಸಂದರ್ಭ ರಿಯಾಜ್ ಮತ್ತು ಸಮೀಮ್ ಹಣ ನೀಡುವಂತೆ ಕೇಳಿದ್ದಾರೆ.

ಈ ವೇಳೆ ಬಾರ್‌ನಲ್ಲಿದ್ದ ಯುವಕರು ಮತ್ತು ಕ್ಯಾಂಟೀನ್ ನಡೆಸುತ್ತಿದ್ದವರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟವೂ ನಡೆದಿದೆ. ಇದನ್ನು ಗಮನಿಸಿದ ಕಾವೇರಿ ಬಾರ್‌ನಲ್ಲಿದ್ದ ಲೋಕೇಶ್ ಎಂಬಾತ ಬಾರ್‌ನ ಮೇಲ್ಭಾಗದ ಕೊಠಡಿಗೆ ತೆರಳಿ ಕಿಟಕಿ ಯಿಂದ ಏಕಾಏಕಿ 3 ಗುಂಡನ್ನು ಕ್ಯಾಂಟೀನ್ ಕಡೆಗೆ ಹಾರಿಸಿದ್ದಾನೆ. ರಿಯಾಜ್‍ನ ತೊಡೆ ಭಾಗಕ್ಕೆ ಮತ್ತು ಸಮೀಮ್‍ನ ಕಾಲಿಗೆ ಗುಂಡು ಹೊಕ್ಕಿದ್ದು ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಮಾಹಿತಿ ಅರಿತ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಠಾಣಾಧಿಕಾರಿ ಷಣ್ಮುಗ ಹಾಗೂ ಸಿಬ್ಬಂದಿ ಗಳು ಸ್ಥಳಕ್ಕೆ ತೆರಳಿ ಆರೋಪಿ ಲೋಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಲೋಕೇಶ್ ನೊಂದಿಗೆ ಅಕ್ರಂ ಎಂಬಾತ ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

ಘಟನೆ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಥಳದಲ್ಲಿದ್ದ ಸಿ.ಸಿ. ಕ್ಯಾಮರಾದ ಡಿ.ವಿ.ಆರ್ ನ್ನು ಪೊಲೀಸರು ವಶಕ್ಕೆ ಪಡೆದು ಪರಿ ಶೀಲನೆ ನಡೆಸುತ್ತಿದ್ದಾರೆ. ಬಂದೂಕಿನಿಂದ ಹಾರಿದ 3 ಗುಂಡುಗಳ ಚಿಲ್ಲುಗಳು ಕ್ಯಾಂಟೀನ್‍ನ ರೋಲಿಂಗ್ ಶೆಟರ್‍ಗೂ ಬಡಿದಿದ್ದು, ನೆಲದಲ್ಲಿ ಹರಡಿಕೊಂಡಿದೆ.

ಕೃತ್ಯ ಹೊಸದಲ್ಲ: ಗುಂಡು ಹಾರಿಸಿ ಯುವಕರಿಬ್ಬರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಲೋಕೇಶ್ ಮತ್ತು ತಲೆ ಮರೆಸಿಕೊಂಡಿರುವ ಶಂಕಿತ ಆರೋಪಿ ಅಕ್ರಂ ಎಂಬವರು ಕೆಲ ತಿಂಗಳ ಹಿಂದೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಿಂಭಾಗದ ಮನೆಗೆ ರಾತ್ರಿ 10.30ರ ಸಮಯದಲ್ಲಿ ಗುಂಡು ಹಾರಿಸಿ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದರು. ಪ್ರಕರಣ ದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರಿದ್ದ ಈ ಆರೋಪಿಗಳು, ಕೆಲ ವಾರಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡೇಟು ತಗುಲಿ ಗಾಯಗೊಂಡಿ ರುವ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಪ್ರಕರಣಕ್ಕೆ ಬಳಸಿದ್ದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರ ಪೂರ್ವಪರ ಪರಿಶೀಲನೆ ನಡೆಸುತ್ತಿದ್ದಾರೆ.

Translate »