ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ
ಕೊಡಗು

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ

October 21, 2018

ಗೋಣಿಕೊಪ್ಪಲು: ಸರಳ ದಸರಾ ಮೂಲಕ 40 ನೇ ವರ್ಷದ ಗೋಣಿಕೊಪ್ಪ ದಸರಾ ತೆರೆ ಎಳೆದುಕೊಂಡಿತು. ಸಾಂಪ್ರದಾಯಿಕ ಆಚರಣೆಯಂತೆ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ತೇರುಗಳು ಸಾಗಿದವು. ಶಾಸಕ ಕೆ.ಜಿ. ಬೋಪಯ್ಯ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಹಾಗೂ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡರು.

ಬೃಹತ್ ತೇರುಗಳ ಅನಾವರಣ ಕಂಡುಬರಲಿಲ್ಲ. ಗರಿಷ್ಠ 3 ವಾಹನಗಳಲ್ಲಿ ಕಲಾಕೃತಿಗಳು ಸಾಗಿದವು. ಒಂದೆರಡು ಟ್ರ್ಯಾಕ್ಟರ್ ಬಳಕೆ ಹೆಚ್ಚಾಗಿ ಕಂಡು ಬಂತು. ರಾಕ್ಷಸ ಸಂಹಾರದಂತಹ ಕಲಾಕೃತಿಗಳು ತೇರುಗಳ ಮೇಲೆ ಬೊಬ್ಬಿರಿದು ಕುಣಿಯುತ್ತಿದ್ದ ಸನ್ನಿವೇಶಗಳು ಈ ಬಾರಿ ಕಂಡು ಬರಲಿಲ್ಲ. 5 ತೇರುಗಳ ಹೊರತು ಪಡಿಸಿ ಉಳಿದವು ನೃತ್ಯವಿಲ್ಲದ ತೇರುಗಳಾಗಿದ್ದವು.
ನಾಡಹಬ್ಬ ದಸರಾ ಸಮಿತಿ ಭಾರತಾಂಬೆಯ ಚಿತ್ರವನ್ನು ಅನಾವರಣಗೊಳಿಸಿತು. ನವಚೇತನಾ ಸಮಿತಿ ದೇವಿಯ ಕೈಯಿಂದ ನೀರು ಚಿಮ್ಮುವ ಕಲಾಕೃತಿ ಮೂಲಕ ಗಮನ ಸೆಳೆಯಿತು. ಯುವ ದಸರಾ ಸಮಿತಿಯು ಕಲಾಕೃತಿ ಮೂಲಕ ಕಲಾಭಿಮಾನಿಗಳನ್ನು ಸೆಳೆಯಿತು. ಸಂಹಾರದ ಚಿತ್ರಗಳು ಆರ್ಭಟಿಸಿದವು. ಎತ್ತರದ ಮಂಟಪದೊಂದಿಗೆ ಸಾಗಿತು.

ಸರ್ವರ ದಸರಾ ಸಮಿತಿ ವಿವಿಧ ಕಲಾಕೃತಿಯೊಂದಿಗೆ ಸಾಗಿ, ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತು. ತೇರು ಅನಾವರಣ ಸಂದರ್ಭ ಪ್ರಾಕೃತಿಕ ವಿಕೋಪದ ಸಂತ್ರಸ್ತರ 4 ಮಕ್ಕಳಿಂದ ಹಾಗೂ ಸಂತ್ರಸ್ತ ತಿಮ್ಮಯ್ಯ ಅವರಿಂದ ಉದ್ಘಾಟಿಸಿ ವಿಶೇಷತೆ ಮೆರೆದರು. ಈ ಸಂದರ್ಭ ಸರ್ವರ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು, ಉದ್ಯಮಿ ಅಜಿತ್ ಅಯ್ಯಪ್ಪ, ಅನೀಶ್ ಮಾದಪ್ಪ, ಸ್ಥಳೀಯ ಸಮ್ಮದ್ ಉಪಸ್ಥಿತರಿದ್ದರು.

ಸ್ನೇಹಿತರ ಬಳಗ ಹೆಚ್ಚು ಕಲಾಕೃತಿಗಳನ್ನು ಅನಾವರಣಗೊಳಿಸಿ, ಎತ್ತರದ ಮಂಟಪದೊಂದಿಗೆ ಗಮನ ಸೆಳೆಯಿತು. ಕಾಡ್ಲಯ್ಯಪ್ಪ, ನಮ್ಮ ದಸರಾ ಸಮಿತಿ ಹಾಗೂ ಶಾರದಾಂಬ ಸಮಿತಿ ತೇರುಗಳು ಮೆರ ವಣಿಗೆಯಲ್ಲಿ ಪಾಲ್ಗೊಂಡವು. ಬಹುಮಾನವಿಲ್ಲದ ಕಾರಣ ಪ್ರದರ್ಶನ ಕ್ಕಾಗಿ ಮಂಟಪಗಳು ಪಾಲ್ಗೊಂಡವು. ಮಾರುಕಟ್ಟೆಯಿಂದ ಬಂದ ನವ ಚೇತನಾ, ಯುವ ದಸರಾ ಹಾಗೂ ಸರ್ವರ ದಸರಾ ಸಮಿತಿ ತೇರುಗ ಳೊಂದಿಗೆ ಹೆಚ್ಚು ಕಲಾಭಿಮಾನಿಗಳು ಕುಣಿದುಕೊಂಡು ಸಾಗಿದರು.

ಪರಿಣಾಮ ವ್ಯಾಪಾರಿಗಳಿಗೂ ಕೂಡ ನಿರೀಕ್ಷಿಸಿದ ಮಟ್ಟದಲ್ಲಿ ವ್ಯಾಪಾರ ನಡೆಯಲಿಲ್ಲ. ರಸ್ತೆ ಬದಿಗಳಲ್ಲಿ, ಕಾಫಿ, ಟೀ, ಖಾರ ತಿಂಡಿ, ಐಸ್‍ಕ್ರೀಂ, ಆಟಿಕೆ ವಸ್ತುಗಳ ವ್ಯಾಪಾರಿಗಳು ಕೂಡ ನಿರಾಸೆ ಅನುಭವಿ ಸಿದರು. ಜನರ ಸಂಖ್ಯೆ ಕಡಿಮೆ ಇದ್ದ ಕಾರಣ ವಾಹನ ದಟ್ಟಣೆ ಕೂಡ ಉಂಟಾಗಲಿಲ್ಲ. ಪೊಲೀಸ್ ವ್ಯವಸ್ತೆ ಜನರೊಂದಿಗೆ ಉತ್ತಮ ವಾಗಿ ಸ್ಪಂದಿಸಿತು. ತೇರುಗಳು ಮುಖ್ಯರಸ್ತೆಗೆ ಸೇರಿದ ನಂತರ ವಾಹನ ಸಾಗಲು ಅನುವು ಮಾಡಿಕೊಡಲಾಯಿತು. ಪಟ್ಟಣದ ಸಮೀಪ ರಸ್ತೆ ಬದಿಗಳಲ್ಲಿ ಕೂಡ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ರಸಮಂಜರಿಯಲ್ಲಿ ಕುಣಿದ ಅಭಿಮಾನಿಗಳು: ಬಸ್ ನಿಲ್ದಾಣ ದಲ್ಲಿನ ವೇದಿಕೆಯಲ್ಲಿ ಸರಿಗಮಪ ಸೆಲೆಬ್ರಿಟಿ ತಂಡ ನೃತ್ಯ ಹಾಗೂ ಹಾಡಿನ ಮೂಲಕ ಸಂಗೀತ ಪ್ರಿಯರನ್ನು ಕುಣಿಯುವಂತೆ ಮಾಡಿದರು. ಸರಿಗಮಪ ಖ್ಯಾತಿಯ ಚೆನ್ನಪ್ಪ ವಿಶೇಷ ಆಕರ್ಷಣೆಯಾದರು. ಹಿನ್ನೆಲೆ ಗಾಯಕ ಸಂತೋಷ್ ವೆಂಕಿ, ಶರ್ಮ ಇವರುಗಳು ಪಾಲ್ಗೊಂಡಿದ್ದರು.

Translate »