ಗುಮಟಾಪುರದಲ್ಲಿ ಸಗಣಿ ಸಂಭ್ರಮದ ‘ಗೋರೆಹಬ್ಬ’
ಚಾಮರಾಜನಗರ

ಗುಮಟಾಪುರದಲ್ಲಿ ಸಗಣಿ ಸಂಭ್ರಮದ ‘ಗೋರೆಹಬ್ಬ’

November 10, 2018

ಚಾಮರಾಜನಗರ: ಸಗಣಿ ನೋಡಿದರೆ ದೂರ ಸರಿಯುವ, ಮೂಗು ಮುಚ್ಚಿಕೊಳ್ಳುವ ದಿನಗಳಲ್ಲಿ ಸಗಣಿ ಎರಚಾಡಿಕೊಂಡು ಹಬ್ಬ ಆಚರಿಸಲಾಗುತ್ತದೆ ಎಂದರೆ ನೀವು ನಂಬುವುದಿಲ್ಲ. ಇದು ನಂಬಲು ಅಸಾಧ್ಯವಾದರೂ ನಂಬಲೇ ಬೇಕು. ಏಕೆಂದರೆ ಇಂತಹ ವಿಶಿಷ್ಠ ಆಚ ರಣೆಯ `ಗೋರೆಹಬ್ಬ’ ತಮಿಳುನಾಡಿಗೆ ಸೇರಿರುವ ತಾಳವಾಡಿ ಸಮೀಪದ ಅಚ್ಚ ಕನ್ನಡಿಗರೇ ವಾಸಿಸುವ ಗುಮಟಾಪುರದಲ್ಲಿ ಸಂಭ್ರಮ, ಸಡಗರದಿಂದ ಶುಕ್ರವಾರ ನಡೆಯಿತು.

ಪ್ರತಿವರ್ಷ ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಮರುದಿನ ಈ ಹಬ್ಬವನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಸಹ ಗ್ರಾಮದಲ್ಲಿ ಈ ವಿಶಿಷ್ಠ ಹಬ್ಬವನ್ನು ಆಚರಿಸಲಾಯಿತು. ಜಾತಿ-ಬೇಧವಿಲ್ಲದೇ ಎಲ್ಲಾ ಸಮುದಾಯಗಳ ಯುವಕರು ಸಗಣಿ ರಾಶಿ ಮೇಲೆ ಉರುಳಾಡಿ, ಸಗಣಿ ಎರಚಾಡುವ ಮೂಲಕ ಸಹಬಾಳ್ವೆ ಸಾರುವ ಜೊತೆಗೆ ಸೌಹಾರ್ದತೆ ಮೆರೆದರು.

ಗೋರೆಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ತಳೀರು ತೋರಣಗಳಿಂದ ಶೃಂಗರಿಸಲಾಗಿತ್ತು. ಬೆಳಿಗ್ಗೆಯೇ ಯುವಕರು ಮನೆ ಮನೆಗೆ ತೆರಳಿ ಸಗಣಿಯನ್ನು ಸಂಗ್ರಹಿಸಿ, ಬೀರೇಶ್ವರ ದೇವಾಲ ಯದ ಬಳಿ ರಾಶಿ ಹಾಕಿದರು. ಈ ವೇಳೆ ಯುವಕರ ಜೊತೆ ತೆರಳಿದ್ದ ಸಣ್ಣ ಮಕ್ಕಳು ಕೊಟ್ಟಿಗೆಯಲ್ಲಿ ಸಗಣಿಯಲ್ಲಿ ಹೊಡೆದಾಡಿ ಕೊಂಡು ಹಬ್ಬಕ್ಕೆ ಮೆರಗು ತಂದರು. ನಂತರ ಮನೆಮನೆಗಳಲ್ಲಿ ಹಾಲು, ತುಪ್ಪ ಸಂಗ್ರಹಿಸಿ ಬೀರೇಶ್ವರನಿಗೆ ಅಭಿಷೇಕ ಮಾಡಲಾಯಿತು.

ಬಳಿಕ ಗ್ರಾಮದ ಕೆರೆಯಲ್ಲಿ ಕತ್ತೆಯ ಮೈ ತೊಳೆದು ಗ್ರಾಮದ ಮಹದೇವ ಹಾಗೂ ನಾಗೇಂದ್ರ ಎಂಬುವವರಿಗೆ ಹುಲ್ಲಿನಿಂದ ತಯಾರಿಸಿದ್ದ ಮೀಸೆ ಹಾಗೂ ಗಡ್ಡವನ್ನು ಕಟ್ಟಲಾಯಿತು. ಬಳಿಕ ಹಂಬು ಸೋಪಿನ ಹಾರ ಹಾಕಿದ ನಂತರ ಮಹದೇವನಿಗೆ ಚಾಡಿಕೋರನೆಂದು ಹೆಸರಿಟ್ಟು, ಕತ್ತೆ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕತ್ತೆ ಪಕ್ಕ ದಲ್ಲಿ ನಾಗೇಂದ್ರ ತೆರಳುವ ಮೂಲಕ ಮಹದೇವನಿಗೆ ಸಹ ಚಾಡಿಕೋರನಾಗಿ ಸಾಥ್ ನೀಡಿದರು.

ಈ ವೇಳೆ ದಾರಿಯುದ್ದಕ್ಕೂ ಚಾಡಿ ಕೋರರನ್ನು ಮಾತು, ಕೈಸನ್ನೆ ಮೂಲಕ ನಿಂದಿಸಲಾಯಿತು. ಮೆರವಣಿಗೆ ಬೀರೇ ಶ್ವರ ದೇವಾಲಯದ ಆವರಣಕ್ಕೆ ಆಗಮಿಸಿ ದಾಗ ಚಾಡಿಕೋರರಿಗೆ ಕಟ್ಟಲಾಗಿದ್ದ ಮೀಸೆ, ಗಡ್ಡ, ಹಾರವನ್ನು ಸಗಣಿಯ ರಾಶಿಗೆ ಹಾಕಲಾಯಿತು. ಗ್ರಾಮದ ಪ್ರಮುಖ ರೆಲ್ಲರೂ ಬೀರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತೀರ್ಥವನ್ನು ತೊಪ್ಪೆ ರಾಶಿಗೆ ಹಾಕಲಾಯಿತು. ನಂತರ ಸಗಣಿ ಯಾಟ ಆರಂಭವಾಯಿತು.

ಈ ವೇಳೆ ಸಗಣಿಯನ್ನು ಉಂಡೆ ಮಾಡಿ ಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ ಕೊಂಡರು. ತಮ್ಮ ಶಕ್ತಾನುಸಾರ ಸಗಣಿಯನ್ನು ಉಂಡೆ ಮಾಡಿಕೊಂಡು ಅವರು- ಇವರೆನ್ನದೇ ಮೈಮೇಲೆ ಹಾಕಿದರು. ಕೆಲವರು ಸಗಣಿ ರಾಶಿಯಲ್ಲಿ ಉರುಳಾಡಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಬಳಿಕ ಹಿಡಿಕಟ್ಟೆಗಳಿಂದ ಗೊಂಬೆಯನ್ನು ನಿರ್ಮಿಸಿ ಅದನ್ನು ಸುಡಲಾಯಿತು. ಇದಾದ ನಂತರ ಸಗಣಿಯಾಟದಲ್ಲಿ ತೊಡಗಿದ್ದ ವರು ಕೆರೆಯಲ್ಲಿ ಸ್ನಾನ ಮಾಡಿದರು. ಈ ಮೂಲಕ ವಿಶಿಷ್ಠವಾಗಿ ಆಚರಿಸಲ್ಪ ಡುವ ಗೋರೆಹಬ್ಬಕ್ಕೆ ತೆರಬಿದ್ದಿತು.

ಗೋರೆಹಬ್ಬದ ಹಿನ್ನೆಲೆ

ಗುಮಟಾಪುರ ಗ್ರಾಮದ ಗೌಡನ ಮನೆಯಲ್ಲಿ ದೇವರ ಗುಡ್ಡನೊಬ್ಬ ಕೆಲಸ ಮಾಡು ತ್ತಿದ್ದ. ಈತ ಇದ್ದಕ್ಕಿಂದ್ದಂತೆ ಮೃತಪಟ್ಟಾಗ ಆತ ಬಳಸುತ್ತಿದ್ದ ಜೋಳಿಗೆ, ಬೆತ್ತವನ್ನು ತಿಪ್ಪೆಗೆ ಎಸೆಯಲಾಗಿತ್ತು. ಕೆಲ ದಿನಗಳ ಬಳಿಕ ಗೌಡನ ಎತ್ತಿನಗಾಡಿಯೂ ಜೋಳಿಗೆ, ಬೆತ್ತ ಎಸೆಯಲಾಗಿದ್ದ ತಿಪ್ಪೆ ಮೇಲೆ ಹಾದು ಹೋಗುವಾಗ ಜೋಳಿಗೆ ಮತ್ತು ಲಿಂಗವೊಂದು ಕಾಣಿಸಿಕೊಂಡಿತು. ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಲಿಂಗದಿಂದ ರಕ್ತ ಬರುತ್ತದೆ. ಅದೇ ದಿನ ಗೌಡನ ಕನಸಿನಲ್ಲಿ ದೇವರು ಕಾಣಿಸಿಕೊಂಡು ದೋಷ ನಿವಾ ರಣೆಗಾಗಿ ಗ್ರಾಮದಲ್ಲಿ ಗುಡಿ ಕಟ್ಟಿಸಬೇಕು. ಈ ಗುಡಿ ಬಳಿ ದೀಪಾವಳಿ ಹಬ್ಬದ ಮರು ದಿನ ಸಗಣಿ ಹಬ್ಬ ಆಚರಿಸುವಂತೆ ಹೇಳಿತು ಎಂಬ ಪ್ರತೀತಿ ಇದೆ. ಹೀಗಾಗಿ ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿ ಇದ್ದ ಜಾಗದಲ್ಲೇ ಬೀರಪ್ಪನ ದೇವಸ್ಥಾನ ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿಯೇ ಈ ವಿಶಿಷ್ಠ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

Translate »