ಅದ್ಧೂರಿ ಬಸವ ಜಯಂತಿ ಆಚರಣೆಗೆ ತೀರ್ಮಾನ
ಚಾಮರಾಜನಗರ

ಅದ್ಧೂರಿ ಬಸವ ಜಯಂತಿ ಆಚರಣೆಗೆ ತೀರ್ಮಾನ

July 24, 2018

ಗುಂಡ್ಲುಪೇಟೆ: – ‘ಇದೇ ತಿಂಗಳ 25ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬಸವಜಯಂತಿ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ಮೇಳಗಳೊಂದಿಗೆ ಶ್ರೀಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 10.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಮಾರಂಭದ ಸಾನಿಧ್ಯವನ್ನು ಸುತ್ತೂರು ಮಠಾಧ್ಯಕ್ಷ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಸಿದ್ದಗಂಗಾ ಕ್ಷೇತ್ರದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಕನಕಪುರ ದೇಗುಲ ಮಠಾಧ್ಯಕ್ಷ ಮುಮ್ಮಡಿ ಸೇರಿದಂತೆ ತಾಲೂಕಿನ ಮಠಾಧೀಶರು ಭಾಗವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಾಜಿ ಸಚಿವೆ ಡಾ.ಎಂ.ಸಿ.ಮೋಹನ ಕುಮಾರಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯ ನಟೇಶ್, ಮುಖಂಡರಾದ ಗುರುಸ್ವಾಮಿ, ಜಿ.ಕೆ.ನಾಗಪ್ಪ, ಹಂಗಳ ಪ್ರಣಯ್, ರೇವಣ್ಣ, ಮಂಜುನಾಥ್, ಬಸವಣ್ಣ, ಕುಮಾರ್, ಜಿ.ಕೆ.ಲೋಕೇಶ್ ಸೇರಿದಂತೆ ಅಖಿಲಭಾರತ ವೀರಶೈವ ಮಹಾಸಭಾದ ತಾಲೂಕು ಘಟಕ ಮತ್ತು ಬಸವ ಸೇವಾ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

ಬಸವಣ್ಣನ ಫ್ಲೆಕ್ಸ್ ಹರಿದು ಹಾಕಿರುವ ಕಿಡಿಗೇಡಿಗಳು

ಗುಂಡ್ಲುಪೇಟೆ: ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯಲ್ಲಿ ಜು.25 ನಡೆಯಲಿರುವ ಬಸವ ಜಯಂತಿ ಆಚರಣೆಯ ಹಿನ್ನೆಲೆ ಯಲ್ಲಿ ಅಳವಡಿಸಿದ್ದ ಶ್ರೀಬಸವೇಶ್ವರ ಮತ್ತು ಸ್ವಾಮೀಜಿಗಳ ಭಾವಚಿತ್ರಗಳನ್ನೊಳ ಗೊಂಡ 10ಕ್ಕೂ ಹೆಚ್ಚು ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಬ್ಲೇಡ್‍ನಿಂದ ಹರಿದು ಹಾಕಿರುವ ಘಟನೆ ನಡೆದಿದೆ.

ಇದೇ 25ರಂದು ಪಟ್ಟಣದಲ್ಲಿ ವಿಜೃಂಭಣೆಯಿಂದ ಬಸವ ಜಯಂತಿ ಆಚರಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ದೇವರಾಜ ಅರಸು ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಆದರೆ, ರಸ್ತೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹದಿದು ಹಾಕಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಸಮುದಾಯದ ಮುಖಂಡರು ದೂರು ನೀಡಿದ್ದಾರೆ. ಸಮುದಾಯದ ಜನತೆ ಉದ್ವೇಗಕ್ಕೆ ಒಳಗಾಗದೆ ಶಾಂತಿಯಿಂದ ಕಾರ್ಯಕ್ರಮ ನಡೆಸಬೇಕು ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ತಿಳಿಸಿದ್ದಾರೆ.

Translate »