ಜು. 31ರವರೆಗೆ ಎಸ್‍ಐಪಿ ಸದಸ್ಯತ್ವ ಅಭಿಯಾನ
ಚಾಮರಾಜನಗರ

ಜು. 31ರವರೆಗೆ ಎಸ್‍ಐಪಿ ಸದಸ್ಯತ್ವ ಅಭಿಯಾನ

July 24, 2018

ಚಾಮರಾಜನಗರ:  ‘ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಉದ್ದೇಶದಿಂದ ಸ್ವರಾಜ್ ಇಂಡಿಯಾ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗಿದೆ. ಪಕ್ಷದ ಸಂಘಟನೆಗಾಗಿ, ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದುವರೆವಿಗೆ ಅಸ್ತಿತ್ವದಲ್ಲಿ ಇದ್ದ ಸರ್ವೋದಯ ಪಕ್ಷವು ಈಗಾಗಲೇ ಸ್ವರಾಜ್ ಇಂಡಿಯಾ ಪಕ್ಷಕ್ಕೆ ವಿಲೀನವಾಗಿದೆ. ಪಕ್ಷವನ್ನು ಬಲಿಷ್ಠಗೊಳಿಸುವ ಸಲುವಾಗಿ ರಾಜ್ಯದ್ಯಂತ ಈಗಾಗಲೇ ಸದಸ್ಯತ್ವ ಅಭಿಯಾನವನ್ನು ಆರಂಭಿಸ ಲಾಗಿದೆ. ಪಕ್ಷದ ತತ್ವ, ಸಿದ್ದಾಂತ ಹಾಗೂ ನಿಬಂಧನೆಗಳನ್ನು ಒಪ್ಪುವ ಯಾರದಾರೂ 10 ರೂ. ಪಾವತಿಸಿ ಸದಸ್ಯತ್ವ ಪಡೆಯ ಬಹುದು. ಜು. 31ರವರಿಗೆ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು.

ಸ್ವರಾಜ್ ಇಂಡಿಯಾ ಪಕ್ಷವು ಹೋರಾಟದ ಚಳವಳಿಯ ಹಿನ್ನೆಲೆಯಲ್ಲಿ ಬಂದಿದೆ ಎಂದ ಅವರು, ಪಕ್ಷವು ರೈತರ ಪರ ಧ್ವನಿಯಾಗಿದೆ. ಸಾಮಾನ್ಯ ಜನರು ಸಹ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಪಕ್ಷದ ಸಂಘಟನೆಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಎಲ್ಲ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಪಕ್ಷದ ಉಪಾಧ್ಯಕ್ಷೆ ಚುಕ್ಕಿ ನಂಜುಂಡ ಸ್ವಾಮಿ ಮಾತನಾಡಿ, ಶೂನ್ಯ ಬಂಡ ವಾಳದ ನೈಸರ್ಗಿಕ ಕೃಷಿಗೆ ಎಲ್ಲರೂ ಒಲವು ತೋರುವ ಅನಿವಾರ್ಯತೆ ಇದೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಶೀಘ್ರ ದಲ್ಲಿಯೇ ನೈಸರ್ಗಿಕ ಕೃಷಿ ಪ್ರತಿ ಪಾದಕ ಸುಭಾಷ ಪಾಳೇಕರ್ ಅವರೊಂದಿಗೆ ಚರ್ಚೆ ನಡೆಸಲು ವೇದಿಕೆ ಸಿದ್ಧಗೊಂಡಿದೆ ಎಂದರು. ಪಕ್ಷದ ವಿಭಾಗೀಯ ಸಂಘಟಕ ಎ.ಎಂ.ಮಹೇಶ್‍ಪ್ರಭು ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಆ.14 ರೊಳಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಇಲ್ಲದಿದ್ದರೆ, ಆ. 15ರ ಸ್ವಾತಂತ್ರ್ಯ ದಿನದಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ದರ್ಶನ್ ಪುಟ್ಟಣ್ಣಯ್ಯ, ಉಪಾಧ್ಯಕ್ಷ ಕರುಣಾಕರ್, ಜಂಟಿ ಕಾರ್ಯದರ್ಶಿ ಅಭಿರುಚಿ ಗಣೇಶ್ ಇದ್ದರು.

Translate »