ಬೇಲೂರು: ಪುರಸಭೆ ಅನುದಾನವನ್ನು ವಾರ್ಡ್ಗಳಿಗೆ ಮೀಸಲಿಡುವಾಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಕ್ಷೀಣಿಸುತ್ತಿದೆ. ಪುರಸಭೆಯಲ್ಲಿ ಹಣವಿದ್ದರೆ ಮಾತ್ರ ಕೆಲಸ ಎಂಬಂತಾಗಿದೆ ಎಂಬ ಸದಸ್ಯರೊಬ್ಬರ ಆರೋಪ ಇಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವೆ ಆಕ್ರೋಶಭರಿತ ಮಾತುಗಳಿಗೆ ಕಾರಣವಾಯಿತು.
ಶಾಸಕ ಕೆ.ಎಸ್.ಲಿಂಗೇಶ್ ಉಪಸ್ಥಿತಿ ಹಾಗೂ ಪುರಸಭಾ ಅಧ್ಯಕ್ಷೆ ಭಾರತಿ ಅರುಣಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜುಬೇರ್ ಅಹ್ಮದ್, ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತೀವ್ರ ವಿಳಂಬವಾಗುತ್ತಿದೆ. ಹಣವಿದ್ದರೆ ಮಾತ್ರ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಶಾಸಕರು ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸದಸ್ಯ ಶ್ರೀನಿಧಿ ಮಾತನಾಡಿ, ದಾಖಲೆ ಇಲ್ಲದೆ ಪುರಸಭೆ ಭ್ರಷ್ಟಾಚಾರದಿಂದ ಕೂಡಿದೆ ಎಂಬ ಮಾತುಗಳನ್ನು ಆಡಬಾರದು. ಲಿಖಿತ ರೂಪದಲ್ಲಿ ದಾಖಲೆ ಸಹಿತ ಆರೋಪಿಸುವುದು ಒಳ್ಳೆಯದು ಎಂದರು. ಈ ವೇಳೆ ಸದಸ್ಯ ಶ್ರೀನಿಧಿ ಹಾಗೂ ಜಬೇರ್ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ಶಾಸಕ ಕೆ.ಎಸ್.ಲಿಂಗೇಶ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಗೊಳಿಸಿದರು. ಪ್ರತಿ ಬಾರಿಯೂ ಪುರಸಭೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೇಳುವುದನ್ನು ಬಿಡಿ ಎಂದು ಅಧ್ಯಕ್ಷೆ ಭಾರತಿ ಅರುಣಕುಮಾರ್ ಜುಬೇರ್‍ಅಹ್ಮದ್‍ಗೆ ಸಲಹೆ ನೀಡಿದರು.
ಇದಕ್ಕೂ ಸುಮ್ಮನಿರದ ಸದಸ್ಯ ಜುಬೇರ್‍ಅಹ್ಮದ್, ಕಾಂಗ್ರೆಸ್‍ನ ಸದಸ್ಯರಾದ ನಾವುಗಳು ಮಾತನಾಡುವ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶ್ರೀನಿಧಿ ಪ್ರತಿಯೊಂದು ವಿಷಯಕ್ಕೆ ಮೂಗು ತೂರಿಸುತ್ತಾರೆ. ನಮ್ಮ ಪ್ರಶ್ನೆಗೆ ನೇರವಾಗಿ ಅಧ್ಯಕ್ಷರೇ ಉತ್ತರ ನೀಡಲಿ ಎಂದು ಆಗ್ರಹಿಸಿದರು. ಸದಸ್ಯ ಚನ್ನಕೇಶವ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುವ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾ ಚಾರ ನಡೆದಿದೆ. ಪುರಸಭೆಯಿಂದ ಕಳೆದ ವರ್ಷ 22 ಮಳಿಗೆ ಗಳನ್ನು ಹರಾಜು ಮಾಡಲಾಗಿದೆ. ಆದರೆ ಹರಾಜು ಪಡೆದ ಮಾಲೀಕ ರಿಗೆ ಇಲ್ಲಿಯ ತನಕ ಮಳಿಗೆ ಹಸ್ತಾಂತರ ಮಾಡಿಲ್ಲ. ಹಾಗೆಯೇ ಮಳಿಗೆಯಲ್ಲಿ ಇರುವವರನ್ನು ಖಾಲಿ ಮಾಡಿಸಿಲ್ಲ. ಈ ಬಗ್ಗೆ ಅಧಿಕಾರಿ ಗಳು ಮೌನ ವಹಿಸಿದ್ದು, ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ಬಾಡಿಗೆದಾರರಿಗೆ ಈಗಾಗಲೇ ಖಾಲಿ ಮಾಡುವಂತೆ 3 ನೋಟೀಸ್ ನೀಡಲಾಗಿದೆ. ಚುನಾವಣೆಯ ಕಾರ್ಯನಿಮಿತ್ತ ಒತ್ತಡದಲ್ಲಿ ಇದ್ದುದ ರಿಂದ ನಂತರ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ನಾಳೆಯಿಂದಲೇ ಬಾಡಿಗೆದಾರರ ಖಾಲಿ ಮಾಡಿಸುವ ಕುರಿತು ಕಾರ್ಯೋನ್ಮುಖರಾಗುತ್ತೇವೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ಸ್ಪಷ್ಟಪಡಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಗಿರೀಶ್, ಮಳಿಗೆಗಳನ್ನು ಪುರಸಭಾ ವಶಕ್ಕೆ ಪಡೆಯದೇ ಮರು ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಇದು ನಿಯಮಕ್ಕೆ ವಿರುದ್ಧವಾಗಿದೆ. ಹೊಸದಾಗಿ ಹರಾಜು ಕೂಗಿದವರಿಗೆ ನಿಗದಿತ ಸಮಯದೊಳಗೆ ಮಳಿಗೆ ವಶಕ್ಕೆ ನೀಡಬೇಕಿತ್ತು. ಆದರೆ ಕಳೆದ 14 ತಿಂಗಳಿನಿಂದಲೂ ಮಳಿಗೆಗಳನ್ನು ಅವರ ವಶಕ್ಕೆ ನೀಡಿಲ್ಲ. ಆದ್ದರಿಂದ ಹೊಸದಾಗಿ ಹರಾಜು ಕೂಗಿದವರು ಮಳಿಗೆ ನಮಗೆ ಬೇಡ, ನಾವು ಕಟ್ಟಿರುವ ಠೇವಣಿ ಹಣ ವಾಪಸ್ ನೀಡಿ ಎಂದು ಕಳೆದ 6 ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಕಳೆದ 2 ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದು ಹರಾಜು ಕೂಗಿದವರಿಗೆ ಹಣ ವಾಪಸ್ ನೀಡಿ ಮರು ಹರಾಜು ಮಾಡಲು ತೀರ್ಮಾನವೂ ಆಗಿದೆ. ತೀರ್ಮಾನದಂತೆ ಏನೆಲ್ಲಾ ನಡೆದಿದೆ ಎಂಬುದು ಈವರೆಗೆ ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಾಜು ಕೂಗಿದವರು ಠೇವಣಿ ಕಟ್ಟಿದ್ದ ಹಣ ವಾಪಸ್ ಕೊಡಲು ಸಾಧ್ಯವಿಲ್ಲ. ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡುವಂತೆ ಸದಸ್ಯ ಶ್ರೀನಿಧಿ ಸೂಚಿಸಿದರು. ಇವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸದಸ್ಯರಾದ ಜುಬೇರ್‍ಅಹ್ಮದ್, ಗಿರೀಶ್, ಪೈಂಟ್ ರವಿ ಅವರು, ನಿಗದಿತ ವೇಳೆಯಲ್ಲಿ ಅವರಿಗೆ ಮಳಿಗೆ ವಶಕ್ಕೆ ಕೊಡಬೇಕಿತ್ತು. ಕೊಡದೇ ಇರುವುದು ಪುರಸಭೆಯ ತಪ್ಪಾಗಿದೆ. ಆದ್ದರಿಂದ ಠೇವಣಿ ಹಣ ವಾಪಸ್ ಕೊಡಬೇಕೆಂದು ಒತ್ತಾಯಿಸಿದರು. ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಹಿಂದೆ ಮಳಿಗೆಗಳ ಹರಾಜು ಆಗಿದ್ದು, ಹರಾಜು ಕೂಗಿದವರಿಗೆ ಠೇವಣಿ ಹಣ ವಾಪಸ್ ಮಾಡುವ ಕುರಿತು ಕಾನೂನು ಸಲಹೆ ಪಡೆದು ತೀರ್ಮಾನಕೈಗೊಳ್ಳಿ ಎಂದು ಸಲಹೆ ನೀಡಿದರು.
ಸದಸ್ಯ ಬಿ.ಎಲ್.ಧರ್ಮೇಗೌಡ ಮಾತನಾಡಿ, ಪುರಸಭೆಯಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ 48 ವಿಷಯಗಳನ್ನು ಚರ್ಚೆಗೆ ತಂದಿದ್ದು, ಇಷ್ಟೊಂದು ವಿಷಯಗಳನ್ನು ಚರ್ಚೆ ನಡೆಸುವುದು ಕಷ್ಟ. ಇರುವ ಸಮಯದಲ್ಲಿ ಬೇಕಾಬಿಟ್ಟಿ ವಿಷಯಗಳ ಚರ್ಚೆ ಸಲ್ಲದು. ಈ ಬಗ್ಗೆ ಮುಖ್ಯಾಧಿಕಾರಿಗಳು ಗಮನ ನೀಡಬೇಕು ಎಂದರು.
ಸರ್ಕಾರದಿಂದ ಬಂದ ಅನುದಾನವನ್ನು ವಾರ್ಡ್‍ಗಳಿಗೆ ಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಮ್ಮ ವಾರ್ಡ್ ನಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಪೌರಕಾರ್ಮಿಕರನ್ನೂ ಸಹ ಕಚೇರಿ ಒಳಗಿನ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದೀರಿ. ಸ್ವಚ್ಛತೆ ಮಾಡಿಸಲು ಮೇಸ್ತ್ರಿ, ಅಧಿಕಾರಿಗಳಿಗೆ ಹತ್ತಾರು ಬಾರಿ ಫೋನ್ ಮಾಡಿ ಕರೆಸುವ ದುಸ್ಥಿತಿ ಬಂದಿದೆ ಎಂದು ತರಾಟೆ ತೆಗೆದುಕೊಂಡರು.
ಈ ವೇಳೆ ಸತೀಶ್ ಹಾಗೂ ಅಧ್ಯಕ್ಷೆ ಭಾರತಿ ಅರುಣಕುಮಾರ್ ನಡುವೆ ಉದ್ವೇಗದ ಮಾತಿನ ಚಕಮಕಿ ನಡೆಯಿತು. ಸಭೆಗೆ ಬರುವುದು ಚರ್ಚೆ ಮಾಡಲಿಕ್ಕೆ ಹೊರತು ಊಟ ಮಾಡಿಕೊಂಡು ಹೋಗಲು ಅಲ್ಲ ಎಂದು ಸತೀಶ್ ಛೇಡಿಸಿದರು. ಸದಸ್ಯ ಶಾಂತ ಕುಮಾರ್, ಪುರಸಭೆಯಲ್ಲಿ 42 ಜನ ಪೌರ ಕಾರ್ಮಿಕರಿದ್ದು, ಸರ್ಕಾರದ ನಿಯಮದ ಪ್ರಕಾರ 20 ಜನರು ಕಾಯಂ ಆಗಲಿದ್ದಾರೆ. ಉಳಿದವರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಎಲ್ಲರಿಗೂ ಅನುಕೂಲ ಆಗುವಂತೆ ಪ್ರಯತ್ನಿಸಬೇಕೆಂದರು. ಉಪಾಧ್ಯಕ್ಷ ಅರಣ್‍ಕುಮಾರ್ ಹಾಗೂ ಮುಖ್ಯಾಧಿಕಾರಿ ಮಂಜುನಾಥ್ ಹಾಜರಿದ್ದರು.