ಮೈಸೂರು: ನಾಳೆ (ಗುರುವಾರ) ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿರುವ ಮತ ಎಣಿಕಾ ಕಾರ್ಯಕ್ಕೆ ಇನ್ನಿಲ್ಲದ ಭಾರೀ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ ಯೋಜನೆ ಕುರಿತು ಡಿಸಿಪಿ ಎಂ.ಮುತ್ತುರಾಜ್, ಇಂದು ಸಂಜೆ ಮತ ಎಣಿಕಾ ಕೇಂದ್ರದ ಬಳಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುವ ಬಗ್ಗೆ ಹಾಗೂ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತಂತೆ ಬ್ರೀಫ್ ಮಾಡಿದರು. 6 ಮಂದಿ ಎಸಿಪಿ ಮಟ್ಟದ ಅಧಿಕಾರಿ ಗಳು, 22 ಪೊಲೀಸ್ ಇನ್ಸ್‍ಪೆಕ್ಟರ್, 23 ಸಬ್ ಇನ್ಸ್‍ಪೆಕ್ಟರ್, 103 ಎಎಸ್‍ಐಗಳು, 582 ಹೆಡ್ ಕಾನ್‍ಸ್ಟೇಬಲ್‍ಗಳು, 6 ಸಿಎಆರ್ ತುಕಡಿ, 3 ಕೆಎಸ್‍ಆರ್‍ಪಿ ತುಕಡಿ, 30 ಕಮಾಂಡೋ ಪಡೆ ಸಿಬ್ಬಂದಿ, 10 ಮೌಂಟೆಡ್ ಪೊಲೀಸ್, ಶ್ವಾನ ದಳ ಬಾಂಬ್ ಪತ್ತೆ ದಳ, ವಿಧ್ವಂಸಕ ಕೃತ್ಯಗಳ ನಿಗ್ರಹ ದಳದ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಮತ ಎಣಿಕಾ ಕೇಂದ್ರದ ಭದ್ರತಾ ಮೇಲ್ವಿಚಾರಣೆ ನಡೆಸಲಿದ್ದು, ಈಗಾಗಲೇ ಕಾಲೇಜು ಸುತ್ತ ಬ್ಯಾರಿಕೇಡ್‍ಗಳನ್ನು ಅಳವಡಿಸಿ ವಾಹನ ಸಂಚಾರವನ್ನು ಗುರುವಾರ ಬೆಳಿಗ್ಗೆಯಿಂದ ಸ್ಥಗಿತಗೊಳಿಸಲು ತಯಾರಿ ನಡೆಸ ಲಾಗಿದೆ. ಅದೇ ರೀತಿ ಮೈಸೂರು ನಗರದಾದ್ಯಂತ ವ್ಯಾಪಕ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಚುನಾವಣಾ ಫಲಿತಾಂಶದ ನಂತರ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
