ಮೈಸೂರು,ಜೂ.30 – ಹೊರ ರಾಜ್ಯಗಳಿಂದ ಕರ್ನಾ ಟಕಕ್ಕೆ ಬರುವ ವಾಹನಗಳಿಂದ `ಹಸಿರು ಕರ’ ಸಂಗ್ರಹಿ ಸಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ಗ್ರೀನ್ ಟ್ಯಾಕ್ಸ್ ಸಂಗ್ರಹಕ್ಕೆ ಮುನ್ನುಡಿ ಬರೆಯಲು ಮುಂದಡಿ ಇಟ್ಟಿದೆ.
ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹೊರ ರಾಜ್ಯದ ಎಲ್ಲಾ ವಾಹನಗಳಿಗೆ ಹಸಿರು ಕರ ವಿಧಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಕರ್ನಾ ಟಕದಲ್ಲಿ ಮಾತ್ರ ಹಸಿರು ಕರ ಸಂಗ್ರಹಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳಿಗೆ ಟ್ಯಾಕ್ಸ್ ಸಂಗ್ರಹಿಸುತ್ತಿರಲಿಲ್ಲ. ಆದರೆ ನಿಯಮಾನುಸಾರ ಹಳದಿ ಬಣ್ಣದ ಬೋರ್ಡ್ ಹೊಂದಿರುವ ಎಲ್ಲಾ ವಾಹನಗಳಿಗೆ ಮಾತ್ರ ಟ್ಯಾಕ್ಸ್ ಕಲೆ ಹಾಕಲಾಗುತ್ತಿತ್ತು. ಆದರೆ ನೆರೆ ರಾಜ್ಯಗಳಲ್ಲಿ ತಮ್ಮ ರಾಜ್ಯ ದಲ್ಲಿ ನೋಂದಣಿಯಾಗಿರುವ ವಾಹನಗಳನ್ನು ಹೊರತು ಪಡಿಸಿ ಅನ್ಯ ರಾಜ್ಯದ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ವಿಧಿ ಸುತ್ತಿದ್ದವು. ಇದರಿಂದ ಆ ರಾಜ್ಯಗಳ ಸರ್ಕಾರಕ್ಕೆ ಆದಾಯ ಸಂಗ್ರಹವೂ ಆಗುತ್ತಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಗ್ರೀನ್ ಟ್ಯಾಕ್ಸ್ ಸಂಗ್ರಹಿಸುವ ಮಾರ್ಗ ಕುರಿತಂತೆ ಪ್ರಸ್ತಾವನೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸ್ವೇಚ್ಛಾಚಾರದ ಸಂಚಾರಕ್ಕೆ ಬ್ರೇಕ್: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಡುವೆ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದ್ದು, ಕರ್ನಾಟಕ(ಗುಂಡ್ಲುಪೇಟೆ)ದಿಂದ ತಮಿಳುನಾಡು (ಊಟಿ),ಕೇರಳ (ವೈನಾಡು, ಸುಲ್ತಾನ್ ಬತ್ತೇರಿ)ಕ್ಕೆ ಸಂಪರ್ಕ ಕಲ್ಪಿಸಲಿದೆ. ರಾಷ್ಟ್ರೀಯ ಹೆದ್ದಾರಿ 212(766) ಹಾಗೂ 67ರಲ್ಲಿ ಕೇರಳದ ಪ್ರವಾಸಿಗರು ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸೇಚ್ಛಾಚಾರದಂತೆ ಸಂಚರಿಸುವ ಮೂಲಕ ವನ್ಯಜೀವಿಗಳಿಗೆ ಕಿರಿಕಿರಿ ಉಂಟು ಮಾಡು ತ್ತಿರುತ್ತಾರೆ. ಅಲ್ಲದೆ ಮದ್ಯಪಾನ ಮಾಡಿ ಕಾಡಿನಲ್ಲಿ ಖಾಲಿ ಬಾಟಲಿ ಎಸೆದು ಕಾಡಿನ ವಾತಾವರಣ ಹದಗೆಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‍ನಲ್ಲಿಯೇ ಗ್ರೀನ್ ಟ್ಯಾಕ್ಸ್ ಸಂಗ್ರಹಿಸುವುದಕ್ಕೆ ಕ್ರಮ ಕೈಗೊಂಡರೆ ಸ್ವೇಚ್ಛಾಚಾರದ ಸಂಚಾರಕ್ಕೆ ಕಡಿವಾಣ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ.
ಜಿಲ್ಲಾಡಳಿತಕ್ಕೆ ಪತ್ರ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಗ್ರೀನ್ ಟ್ಯಾಕ್ಸ್ ಸಂಗ್ರಹಿಸುವ ಬಗ್ಗೆ ಪ್ರಸ್ತಾಪಿಸಿ ದ್ದಾರೆ. ಇದಕ್ಕೆ ಅಲ್ಲಿನ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಗ್ರ ಮಾಹಿತಿ ಯೊಂದಿಗೆ ಪ್ರಸ್ತಾವನೆ ಕಳುಹಿಸುವುದು ಸೂಕ್ತ ಎಂಬ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಿಂದಲೇ ಗ್ರೀನ್ ಟ್ಯಾಕ್ಸ್ ಸಂಗ್ರಹಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಕಳುಹಿಸಲು ನಿರ್ದರಿಸಲಾಗಿದೆ.
ಕಂದಾಯ ಇಲಾಖೆಯಿಂದ ಸಂಗ್ರಹ: ಗ್ರೀನ್ ಟ್ಯಾಕ್ಸ್ ಸಂಗ್ರಹಿಸುವ ಪ್ರಸ್ತಾವನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಸಲ್ಲಿಸುತ್ತಿದ್ದರೂ, ಗ್ರೀನ್ ಟ್ಯಾಕ್ಸ್ ಅನ್ನು ಕಂದಾಯ ಇಲಾಖೆ ಸಂಗ್ರಹಿಸಲಿದೆ. ಗಡಿ ಭಾಗದ ರಸ್ತೆಗಳಿಂದ ರಾಜ್ಯಕ್ಕೆ ಬರುವ ಎಲ್ಲಾ ನೆರೆ ರಾಜ್ಯದ ವಾಹನಗಳಿಂದ ಚೆಕ್ ಪೋಸ್ಟ್‍ಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಗ್ರೀನ್ ಟ್ಯಾಕ್ಸ್ ಸಂಗ್ರಹಿಸಲಿದ್ದಾರೆ. ಇದರಿಂದ ಕಂದಾಯ ಇಲಾಖೆಗೆ ಕೋಟ್ಯಾಂತರ ರೂ. ಆದಾಯ ಸಂಗ್ರಹವಾಗಲಿದೆ. ಈ ಮೊತ್ತದಿಂದ ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ಪರಿಸರ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಬಹುದಾಗಿದೆ.
ಎಂ.ಟಿ.ಯೋಗೇಶ್‍ಕುಮಾರ್