ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು
ಚಾಮರಾಜನಗರ

ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು

July 10, 2018

ಚಾಮರಾಜನಗರ:  ‘ಉತ್ತರ ಕರ್ನಾಟಕ ದಿಂದ ದಕ್ಷಿಣದ ಮೈಸೂರು ಪ್ರಾಂತ್ಯಕ್ಕೆ ಬಂದ ಗುರುಮಲ್ಲೇಶ್ವರರು ದೇವಾಲಯ ಕಟ್ಟುವ ಬದಲು ಕಾಯಕ ಮತ್ತು ದಾಸೋಹ ಪರಂಪರೆಯ ಮನಸ್ಸನ್ನು ಕಟ್ಟಿದರು’ ಎಂದು ನವದೆಹಲಿ ಬಸವ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾನುವಾರ ಗುರುಮಲ್ಲೇಶ್ವರ ಸೇವಾ ಸಮಿತಿ ವತಿಯಿಂದ ನಡೆದ ಗುರು ಮಲ್ಲೇಶ್ವರರ 119ನೇ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಸವುಳಂಗ ಗ್ರಾಮದಲ್ಲಿ ಜನಿಸಿದ ಗುರುಮಲ್ಲೇಶ್ವರರು 72ವರ್ಷಗಳ ಜೀವನದಲ್ಲಿ ರಾಜ್ಯದ ಹಲವೆಡೆ ಸಂಚರಿಸಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಿ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದರು. ವ್ಯಕ್ತಿಯ ವ್ಯಕ್ತಿತ್ವ ಬೆಳವಣ ಗೆಯಾಗಬೇಕಾದರೆ ಆತ ಕತ್ತಲಿನಿಂದ ಬೆಳಕಿನೆಡೆಗೆ ಬರಬೇಕು ಎಂದು ಅರಿವು ಮೂಡಿಸಿದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮನುಕುಲದ ಉದ್ದಾರಕ್ಕಾಗಿ ಹಲವು ಮಹನೀಯರು ಅವತರಿಸಿದ್ದಾರೆ. ಸಿದ್ದಲಿಂಗಯತಿ, ಗುರುಕಂಬಳೀಶ್ವರ, ಚಿಕ್ಕವೀರದೇಶಿ ಕೇಂದ್ರ ಸ್ವಾಮೀಜಿ ಅವರ ಸಾಲಿನಲ್ಲಿ 19ನೇ ಶತಮಾನದ ಗುರುಮಲ್ಲೇಶ್ವರರು ಇದ್ದಾರೆ. ಬಸವಣ್ಣನವರ ದಾಸೋಹದ ಪರಿಕಲ್ಪನೆಯನ್ನು ಮನೆಮನೆಗೂ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೇಚಂಬಳ್ಳಿ ಮಠದ ಮಹದೇವ ಸ್ವಾಮೀಜಿ, ರಾಮಸಮುದ್ರ ಗುರು ಕಂಬಳೀಶ್ವರ ಮಠದ ಮಹದೇವ ಸ್ವಾಮೀಜಿ, ಮುಖಂಡರಾದ ಅಮ್ಮನಪುರ ಮಲ್ಲೇಶ್, ಸಂತೇಮರಹಳ್ಳಿ ಮಾದಪ್ಪ, ಬಿಸಲವಾಡಿ ಬಸವ ರಾಜಪ್ಪ ಹಾಗೂ ಗುರುಮಲ್ಲೇಶ್ವರ ಸೇವಾಸಮಿತಿ ಪದಾಧಿಕಾರಿಗಳು ಹಾಜರಿದ್ದರು.

Translate »