ಸಚಿವ ವಿ.ಸೋಮಣ್ಣರಿಂದ ಹೆಚ್.ವಿಶ್ವನಾಥ್ ಭೇಟಿ
ಮೈಸೂರು

ಸಚಿವ ವಿ.ಸೋಮಣ್ಣರಿಂದ ಹೆಚ್.ವಿಶ್ವನಾಥ್ ಭೇಟಿ

December 25, 2019

ಮೈಸೂರು, ಡಿ.24(ಆರ್‍ಕೆಬಿ)- ವಸತಿ ಸಚಿವರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳ ವಾರ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಹುಣಸೂರು ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಅಡಗೂರು ಹೆಚ್. ವಿಶ್ವನಾಥ್ ಅವರ ಕುವೆಂಪುನಗರದ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಸೋಮಣ್ಣ, ಅವರೊಂದಿಗೆ ಉಪ ಚುನಾ ವಣೆ ಹಾಗೂ ಇತ್ತೀಚಿನ ವಿದ್ಯಮಾನಗಳ ಕುರಿತು ಕೆಲ ಹೊತ್ತು ಮಾತುಕತೆ ನಡೆಸಿ, ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದು ಹಾರೈಸಿದರು. ಸಚಿವರೊಂದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಇನ್ನಿತರರು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತ ನಾಡಿದ ಸಚಿವ ವಿ.ಸೋಮಣ್ಣ, ಹೆಚ್. ವಿಶ್ವನಾಥ್ ಸೋಲು ನೋವಿನ ಸಂಗತಿ. ನಮಗೆ ಬೇಜಾರಾದಾಗಲೆಲ್ಲಾ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡಿ ಮಾತನಾಡುತ್ತಿದ್ದೆ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದರು.

ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಮಾನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಹೈಕಮಾಂಡ್, ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಸದ್ಯ ಯಾವ ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂಬಿದವರನ್ನು ಕೈಬಿಡುವುದಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.

ಜನವರಿ ಮೊದಲ ವಾರ ದಸರಾ ಲೆಕ್ಕಪತ್ರ ಮಂಡನೆ: ಸಚಿವ ವಿ.ಸೋಮಣ್ಣ ಸ್ಪಷ್ಟನೆ
ಮೈಸೂರು,ಡಿ.24(ಆರ್‍ಕೆಬಿ)-ಮೈಸೂರು ದಸರಾ ಮಹೋತ್ಸವದ ಲೆಕ್ಕ ಪತ್ರವನ್ನು ಜನವರಿ ಮೊದಲ ವಾರದಲ್ಲಿ ಮಂಡನೆ ಮಾಡಲಿರುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದರು.

ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಇನ್ನಿತರ ಕಾರ್ಯಕ್ರಮಗಳು ಬಂದಿದ್ದ ಹಿನ್ನೆಲೆಯಲ್ಲಿ ಲೆಕ್ಕ ಪತ್ರ ಮಂಡನೆ ಸಾಧ್ಯವಾಗಿ ರಲಿಲ್ಲ. ಜನವರಿ 3 ಅಥವಾ 4ರಂದು ಕೆಡಿಪಿ ಸಭೆ ನಡೆಸಲಿದ್ದೇನೆ. ಆ ವೇಳೆ ದಸರಾ ಮಹೋತ್ಸವದ ಖರ್ಚು ವೆಚ್ಚಗಳ ಮಂಡನೆ ಮಾಡಲಿರುವುದಾಗಿ ತಿಳಿಸಿದರು.

ಸರ್ಕಾರದ ತಳಪಾಯ ಗಟ್ಟಿಯಾಗಿದೆ: ಉಪ ಚುನಾವಣೆ ಬಳಿಕ ನಮ್ಮ ತಳಪಾಯ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದೇವೆ. ರಾಜ್ಯದ ಸಾರ್ವಜನಿಕರಿಗೆ ಸಿಎಂ ಬಿ.ಎಸ್.ಯಡಿ ಯೂರಪ್ಪ ತಮ್ಮ 50 ವರ್ಷಗಳ ಅನುಭವವನ್ನು ಓರೆಗೆ ಹಚ್ಚಿ ಮುಂದಿನ 3.5 ವರ್ಷ ರಾಜ್ಯದ ಜನರ ಮನಸ್ಸನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದರು.

ಹೇಳಿದಂತೆ ಮಾಡಲಿರುವ ಸಿಎಂ: ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾತನಾಡಿದ ಅವರು, ಸತ್ಸಂಪ್ರದಾಯದ ಪ್ರಕಾರ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡುತ್ತಾರೆ. ಅವರು ಹೇಳಿದಂತೆ ಮಾಡಿ ತೋರಿಸಲಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಗೂ ಪೌರತ್ವ ಕಾಯ್ದೆ ಗೊಂದಲಕ್ಕೂ ಸಂಬಂಧವಿಲ್ಲ. ಪೌರತ್ವ ಕಾಯ್ದೆಯನ್ನು ಹಿಂದೆ ಪ್ರಧಾನಿ ಯಾಗಿದ್ದ ಮನಮೋಹನ್‍ಸಿಂಗ್ ಅವರೇ ಕಾಯ್ದೆ ಜಾರಿಗೆ ಚಿಂತನೆ ಮಾಡಿದ್ದರು. ಆದರೆ ಭಾವನಾತ್ಮಕವಾಗಿ ಕೆಲವರಿಗೆ ಅದರ ಮಾಹಿತಿ ಸರಿಯಾಗಿ ಇಲ್ಲದ್ದರಿಂದ ಹೀಗಾಗಿದೆ. ಇದು ಹಂತÀ ಹಂತವಾಗಿ ಬಗೆಹರಿಯಲಿದೆ ಎಂದು ಹೇಳಿದರು.

ಜಿಲ್ಲಾ ಮಂತ್ರಿ ಬದಲಾವಣೆ ಸಿಎಂ ವಿವೇಚನೆಗೆ ಬಿಟ್ಟದ್ದು: ಮೈಸೂರು ಜಿಲ್ಲಾ ಮಂತ್ರಿಗಳ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟಿದ್ದು. ಅವರು ನನಗೇನು ಕೆಲಸ ಕೊಟ್ಟಿದ್ದಾರೋ ಅದನ್ನು ಮಾಡುತ್ತಿದ್ದೇನಷ್ಟೆ ಎಂದು ಸ್ಪಷ್ಟಪಡಿಸಿದರು.

Translate »