ವಿವಿಧ ಬೇಡಿಕೆ ಮುಂದಿಟ್ಟು ಹಮಾಲಿ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ
ಮೈಸೂರು

ವಿವಿಧ ಬೇಡಿಕೆ ಮುಂದಿಟ್ಟು ಹಮಾಲಿ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

June 19, 2019

ಮೈಸೂರು: ಕೂಲಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಮಿಕರು ದೊಡ್ಡಗಡಿಯಾರ, ಮಹಾತ್ಮಗಾಂಧಿ ವೃತ್ತ, ಚಿಕ್ಕ ಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಿದರು.

ಮೈಸೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‍ಸಿಎಸ್‍ಸಿ ಹಾಗೂ ಟಿಎಪಿಸಿಎಂಎಸ್ ಗೋದಾಮಿ ನಿಂದ ಅಕ್ಕಿ ಹಾಗೂ ಪಡಿತರ ವಸ್ತುಗಳನ್ನು ಲಾರಿಗೆ ಲೋಡ್ ಮತ್ತು ಅನ್‍ಲೋಡ್ ಮಾಡಲು 2008ರಲ್ಲಿಯೇ ಕ್ವಿಂಟಾಲ್‍ಗೆ 16 ರೂ. ದರ ನಿಗದಿ ಮಾಡಲಾಗಿದೆ. ಆದರೆ ಗುತ್ತಿಗೆದಾರರು ಪರಿಷ್ಕøತ ದರದಲ್ಲಿ ಕೂಲಿ ನೀಡದೆ, ಕ್ವಿಂಟಾಲ್‍ಗೆ 14 ರೂ. ಮಾತ್ರ ನೀಡುತ್ತಿದ್ದಾರೆ. ಇದರಿಂದ ಲೋಡರ್ಸ್‍ಗಳಿಗೆ ತೊಂದರೆ ಯಾಗುತ್ತಿದೆ. ಅಲ್ಲದೆ ಕೆ.ಆರ್.ನಗರ ತಾಲೂಕಿನ ಲೋಡರ್ಸ್‍ಗಳಿಗೆ ಗುತ್ತಿಗೆದಾರ ತುಳಸಿಪ್ರಸಾದ್ ಎಂಬುವರು ಹಮಾಲಿ ಕಾರ್ಮಿಕ ರಿಂದ ಶೇ.1.75ರಷ್ಟು ಇಎಸ್‍ಐ ಹಣ ಹಾಗೂ ಇಪಿಎಫ್‍ಗೆ ಶೇ.12ರಷ್ಟು ಮೊತ್ತವನ್ನು ಕೂಲಿಯಲ್ಲಿ ಕಡಿತ ಮಾಡಿಕೊಂಡಿದ್ದರೂ, ಕೂಲಿ ಕಾರ್ಮಿಕರ ಖಾತೆಗೆ ಜಮೆ ಮಾಡಿಲ್ಲ. ಹಮಾಲಿಗಳನ್ನು ವಂಚಿಸುವುದಕ್ಕೆ ಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ಜಿಲ್ಲೆಯ ಎಲ್ಲಾ ಲೋಡರ್ಸ್‍ಗಳಿಗೂ ಕ್ವಿಂಟಾಲ್‍ಗೆ 16 ರೂ. ದರದಂತೆ ಕೂಲಿ ನೀಡಬೇಕು. 2008ರಿಂದ ಬಾಕಿ ಉಳಿಸಿ ಕೊಂಡಿರುವ 2 ರೂ. (ಕ್ವಿಂಟಾಲ್‍ವೊಂದಕ್ಕೆ) ಅನ್ನು ಕೊಡಿಸಬೇಕು. ಕಡಿತ ಮಾಡಿರುವ ಇಎಸ್‍ಐ ಹಾಗೂ ಇಪಿಎಫ್ ಮೊತ್ತವನ್ನು ಕೂಲಿ ಕಾರ್ಮಿಕರ ಖಾತೆಗಳಿಗೆ ಜಮೆ ಮಾಡಬೇಕು. ಕೂಲಿ ಕಾರ್ಮಿಕರಿಗೆ ಬಾಕಿ ಹಣ ಕೊಡುವವರೆಗೂ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವರದ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ಮಹದೇವ, ಪದಾಧಿಕಾರಿ ಗಳಾದ ಕುಮಾರ, ವಿಕ್ರಮ್ ನಾಯಕ, ಕೃಷ್ಣಪ್ಪ, ಸುÉೀಶ್, ನರಸಿಂಹಮೂರ್ತಿ, ಸಿದ್ದರಾಜು, ಬಸವಲಿಂಗು, ಚಲುವರಾಜು ಸೇರಿದಂತೆ ನೂರಕ್ಕೂ ಹೆಚ್ಚು ಲೋಡರ್ಸ್‍ಗಳು ಪಾಲ್ಗೊಂಡಿದ್ದರು.

Translate »