ದೇವಾಲಯ ಟ್ರಸ್ಟ್ ನ ಪ್ರಭಾವಿ  ನಾಲ್ವರು ಪ್ರಮುಖರ ಕೈವಾಡ
ಮೈಸೂರು

ದೇವಾಲಯ ಟ್ರಸ್ಟ್ ನ ಪ್ರಭಾವಿ ನಾಲ್ವರು ಪ್ರಮುಖರ ಕೈವಾಡ

December 18, 2018

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ದೇವಾಲಯದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ದುರಂತಕ್ಕೆ ಇಬ್ಬರು ಅರ್ಚಕರು, ಟ್ರಸ್ಟ್ ನ ಪ್ರಭಾವಿ ಸೇರಿದಂತೆ ನಾಲ್ಕು ಮಂದಿ ಕಾರಣರಾಗಿದ್ದಾರೆ.

ಸರ್ಕಾರದ ಕೈಸೇರಿರುವ ವರದಿಯಲ್ಲಿ ಈ ನಾಲ್ಕು ಮಂದಿಯ ಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಆದರೆ ಇದನ್ನು ಇದುವರೆಗೂ ಬಹಿರಂಗಗೊಳಿಸಿಲ್ಲ. ಸುಳವಾಡಿ ದೇವಾಲಯದ ಆಡಳಿತ ಮಂಡಳಿ ಮತ್ತು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ವಿಚಾರದಲ್ಲಿನ ವಿವಾದದ ಹಿನ್ನೆಲೆ ಯಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ಇಂತಹ ಹೀನ ಕೃತ್ಯಕ್ಕೆ ಕಾರಣವಾಯಿತು ಎನ್ನಲಾಗಿದೆ.

ಒಂದು ಗುಂಪನ್ನು ಹೆದರಿಸಲು ಹೋಗಿ ಎಸಗಿದ ಅಚಾ ತುರ್ಯ ಇಂತಹ ಪ್ರಮಾದಕ್ಕೆ ತಿರುಗುತ್ತದೆ ಎಂಬ ಅರಿವೂ ಇರಲಿಲ್ಲ. ಈ ಮಧ್ಯೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲೂ ಈ ದುರಂತ ಪ್ರತಿಧ್ವನಿಸಿದೆ. ಪ್ರಸಾದ ಸೇವನೆಯಿಂದ ಮೃತ ಪಟ್ಟವರಿಗೆ ಉಭಯ ಸದನಗಳು ಸಂತಾಪ ವ್ಯಕ್ತಪಡಿಸಿವೆ.

ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸ್ವಯಂಪ್ರೇರಿತ ವಾಗಿ ಸಂತಾಪ ಸೂಚನೆ ಪ್ರಸ್ತಾವ ಬೆಂಬಲಿಸಿ ಮಾತನಾಡಿದ ಗೃಹ ಇಲಾಖೆ ಹೊಣೆ ಹೊತ್ತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರಸಾದಕ್ಕೆ ವಿಷಕಾರಿ ‘ಆರ್ಗನೋ ಪಾಸ್ಫರಸ್’ ಗುಂಪಿಗೆ ಸೇರಿದ ‘ಮೋನೋಕ್ರೊಟೋಪಾಸ್’ ಕೀಟನಾಶಕ ಮಿಶ್ರಣ ಮಾಡಲಾಗಿತ್ತು ಎಂದು ತಿಳಿಸಿ ದ್ದಾರೆ. ಮಾರಮ್ಮ ದೇವಾಲಯದ
ಪ್ರಸಾದದಲ್ಲಿರುವ ವಿಷದ ಬಗ್ಗೆ ರಿಪೋರ್ಟ್ ಬಂದಿದೆ. ಅದರಲ್ಲಿರುವ ವಿಷ ಆರ್ಗ ನೋಫಾಸ್ಪರಸ್ ಗುಂಪಿಗೆ ಸೇರಿದ ‘ಮೋನೋಕ್ರೊಟೋಪಸ್’ ಎಂದು ರಿಪೋರ್ಟ್ ಕೊಟ್ಟಿದ್ದಾರೆ. ಇದು ರೋಗ ಕಂಡುಬಂದಲ್ಲಿ ಬೆಳೆಗಳಿಗೆ ಸಿಂಪಡಿಸುವಂತಹದ್ದು.

ಇದು ಮನುಷ್ಯರ ನರಗಳ ಮೇಲೂ ಪರಿಣಾಮ ಬೀರುತ್ತದೆ ಎಂದರು. ಯಾರು ಪ್ರಸಾದದಲ್ಲಿ ಕೀಟನಾಶಕ ಬೆರೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇನ್ನೂ ಕೆಲವರು ಊರು ಬಿಟ್ಟಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಿದ್ದು, ಒಂದೆರಡು ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು. ಡಿ.14ರಂದು ಮಾರಮ್ಮ ದೇವಾಲಯಕ್ಕೆ ಗೋಪುರ ಕಟ್ಟಲು ಗುದ್ದಲಿ ಪೂಜೆ ನಡೆಸಲಾಗಿತ್ತು. ಅದರಲ್ಲಿ 150ರಿಂದ 200 ಮಂದಿ ಭಾಗವಹಿ ಸಿದ್ದರು. ದೇವಾಲಯದಲ್ಲಿ ಟೊಮೊಟೋಬಾತ್‍ನ್ನು ಪ್ರಸಾದದ ರೂಪದಲ್ಲಿ ನೀಡಿದ್ದಾರೆ.

ಪ್ರಸಾದ ಸ್ವೀಕರಿಸಿದ ಅರ್ಧಗಂಟೆಯಲ್ಲೇ ಭಕ್ತರು ಅಸ್ವಸ್ಥರಾಗಿದ್ದಾರೆ. ಇದುವರೆಗೂ ಒಟ್ಟು 14 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಸಾದದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾ ಲಯಕ್ಕೆ ಕಳುಹಿಸಲಾಗಿದ್ದು, ಕೀಟನಾಶಕ ಬೆರೆಸಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸ್ಥಳೀಯ ಹನೂರು ಶಾಸಕ ಆರ್. ನರೇಂದ್ರ, ಮಾರಮ್ಮ ದೇವಾಲಯದಲ್ಲಿ ಪ್ರಸಾದ ತಿಂದು ಭಕ್ತರು ಮೃತಪಟ್ಟಿರುವ ಘಟನೆಯ ಬಗ್ಗೆ ಕೂಲಂಕುಷ ತನಿಖೆಯಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಮಾರಮ್ಮ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು. ಆಡಳಿತ ಮಂಡಳಿ ಹಾಗೂ ಪೂಜಾರಿಗಳ ನಡುವೆ ಒಡಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾರು ಏನು ಮಾಡಿದ್ದಾರೆಯೋ ಎಂಬ ಅನುಮಾನಗಳು ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಆ ದೇವಾಲಯದಲ್ಲಿ ತೀರ್ಥ, ಪ್ರಸಾದ ಸೇವಿಸಲು ಭಕ್ತರು ಮೀನಾಮೇಷ ಎಣಿಸುತ್ತಿದ್ದಾರೆ. ಮೃತಪಟ್ಟವರು ಬಹುತೇಕ ಬಿದರಹಳ್ಳಿ, ಎಂ.ಜಿ.ದೊಡ್ಡಿಗೆ ಸೇರಿದವರಾಗಿದ್ದಾರೆ. ಓಂಶಕ್ತಿ ದೇವಾಲಯಕ್ಕೆ ಹೋಗುವ ಮುನ್ನ ಮಾರಮ್ಮ ದೇವಾಲಯಕ್ಕೆ ಬಂದು ಪ್ರಸಾದ ಸೇವಿಸಿ ಮೃತಪಟ್ಟಿದ್ದಾರೆ. ಪ್ರಸಾದಲ್ಲಿ ವಿಷ ಸೇರಿಸುವ ಪ್ರಸಂಗ ಹಿಂದೆಂದೂ ಕೇಳಿರಲಿಲ್ಲ. ಈಗಾಗಲೇ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಸರ್ಕಾರ ಪರಿಹಾರ ಘೋಷಿಸಿದೆ. ಇನ್ನೂ ಹೆಚ್ಚಿನ ಧನ ಸಹಾಯವನ್ನು ನೀಡಬೇಕು. ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳಿದ್ದಾರೆ. ಬದುಕಿರುವವರನ್ನು ಉಳಿಸಬೇಕಾಗಿದೆ. ಅಲ್ಲದೆ, 108 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 15 ಮಕ್ಕಳೂ ಸೇರಿದ್ದಾರೆ. 29 ಮಂದಿ ವೆಂಟಿಲೇಟರ್‍ನಲ್ಲೇ ಇದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಮುಖ್ಯಮಂತ್ರಿಯವರು ಸುದ್ದಿ ತಿಳಿದ ತಕ್ಷಣ ಚೆನ್ನೈನಿಂದ ಮೈಸೂರಿಗೆ ಆಗಮಿಸಿ ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಆ ಖರ್ಚನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೂಡ ಮುತುವರ್ಜಿ ವಹಿಸಿ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಾಲಯಗಳಲ್ಲಿ ಆರೋಗ್ಯಾಧಿಕಾರಿ ಪರಿಶೀಲನೆ ನಂತರವೇ ಇನ್ನು ಮುಂದೆ ಪ್ರಸಾದ ವಿನಿಯೋಗ

ಬೆಂಗಳೂರು:  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ದುರಂತ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಇನ್ನು ಮುಂದೆ ಯಾವುದೇ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಮುನ್ನ ಆರೋಗ್ಯ ಇಲಾಖೆಯ ದೃಢೀಕರಣ ಪಡೆಯ ಬೇಕು. ಧಾರ್ಮಿಕ ದತ್ತಿ ಇಲಾಖೆ ಇಂದು ಪ್ರಸಾದ ವಿತರಣೆಗೆ ಸಂಬಂಧಿಸಿದಂತೆ 2 ಪುಟಗಳ ನಿಯಮಾವಳಿ ರೂಪಿಸಿ ಆದೇಶ ಹೊರಡಿಸಿದೆ. ಆದರೆ ಅನುಮತಿ ಇಲ್ಲದೆ ಪ್ರಸಾದ ವಿತರಿಸಿದರೆ ಅಂತಹವರಿಗೆ ಏನು ಶಿಕ್ಷೆ ಎಂಬ ಮಾಹಿತಿ ನಿಯಮದಲ್ಲಿ ಅಳವಡಿಸಿಲ್ಲ. ಪ್ರಸಾದ ತಯಾರಿಸಿದ ನಂತರ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆಗೆ ಒಳಪಡಿಸಿ ಪ್ರಸಾದವು ಸ್ವೀಕಾರಾರ್ಹ ಎಂದು ದೃಢೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ದೇವಸ್ಥಾನಗಳಲ್ಲಿ ನೈವೇದ್ಯ, ಪ್ರಸಾದ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಲು ಕ್ರಮವಹಿಸಬೇಕು. ದೇವರ ನೈವೇದ್ಯಕ್ಕಾಗಿ ಮತ್ತು ದಾಸೋಹಕ್ಕಾಗಿ ಇರುವ ಅಡುಗೆ ಕೋಣೆಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸತಕ್ಕದ್ದು. ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಕಟ್ಟನಿಟ್ಟಾಗಿ ನಿಗಾವಹಿಸಬೇಕು. ಈಗಾಗಲೇ ಇಲಾಖಾ ವ್ಯಾಪ್ತಿಗೆ ಒಳಪಡುವ ಅಧಿ ಸೂಚಿತ ಸಂಸ್ಥೆಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನದಾಸೋಹ ವ್ಯವಸ್ಥೆ ಜಾರಿಗೊಳಿಸಿದ್ದು, ಇಂತಹ ವ್ಯವಸ್ಥೆ ಇರುವ ಕಡೆಗಳಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಜನವರಿ 2012ರಲ್ಲೇ ಸುತ್ತೋಲೆ ಹೊರಡಿಸಲಾಗಿದೆ. ಇದೀಗ ಖಾಸಗಿ ಮತ್ತು ಟ್ರಸ್ಟಿಗಳು ನಡೆಸುವ ದೇವಾಲಯ, ಮಠ-ಮಂದಿರಗಳಲ್ಲೂ ಸುತ್ತೋಲೆಯ 20 ಅಂಶಗಳ ಜೊತೆಗೆ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿದೆ.

ಪ್ರಸಾದದಲ್ಲಿ ‘ಮೋನೋಕ್ರೋಟೊಪಾಸ್’

ಮೈಸೂರು: ಚಾಮರಾಜನಗರ ಜಿಲ್ಲೆ ಸುಳವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ದುರಂತದಲ್ಲಿ ಪ್ರಸಾದಕ್ಕೆ ಆರ್ಗನೋಪಾಸ್ಪರಸ್ ಎಂದೂ ಸಹ ಕರೆಯಲ್ಪಡುವ ‘ಮೋನೋಕ್ರೋಟೊಪಾಸ್’ ಎಂಬ ಕೀಟನಾಶಕ ಮಿಶ್ರಣ ಮಾಡಿರುವುದು ದೃಢಪಟ್ಟಿದೆ ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ವಿತರಿಸಿದ ಪ್ರಸಾದದ ಸ್ಯಾಂಪಲ್ ಅನ್ನು ಮೈಸೂರಿನ ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿ ಸಿಕೊಡಲಾಗಿತ್ತು. ಪರೀಕ್ಷಿಸಿದ ತಜ್ಞರು ನೀಡಿರುವ ಲ್ಯಾಬೋರೇಟರಿ ವರದಿಯಲ್ಲಿ ‘ಮೋನೋಕ್ರೋಟೊ ಪಾಸ್’ ಕ್ರಿಮಿನಾಶಕವಿದೆ ಎಂದು ತಿಳಿಸಲಾಗಿದೆ ಎಂದು ‘ಮೈಸೂರು ಮಿತ್ರ’ನಿಗೆ ಅವರು ತಿಳಿಸಿದರು.

ಬೆಳೆಗಳಿಗೆ ತಗಲುವ ರೋಗಗಳ ನಿಯಂತ್ರಣಕ್ಕೆ ಸಿಂಪಡಿಸಲು ಬಳಸುವ ಕೀಟನಾಶಕ ಇದಾಗಿದ್ದು, ಆಹಾರದಲ್ಲಿ ಮಿಶ್ರಣ ಮಾಡಿ ತಿಂದರೆ ಮನುಷ್ಯರೂ ಸಹ ಸಾವನ್ನಪ್ಪುತ್ತಾರೆ ಎಂಬುದನ್ನು ಪ್ರಯೋಗಾಲಯದ ವರದಿಯಲ್ಲಿ ತಜ್ಞರು ದೃಢಪಡಿಸಿದ್ದಾರೆ ಎಂದು ಶರತ್‍ಚಂದ್ರ ತಿಳಿಸಿದರು. ಆದರೆ ಅಷ್ಟೊಂದು ಪ್ರಮಾಣದ ಕ್ರಿಮಿನಾಶಕ ಔಷಧಿಯನ್ನು ಸುಳವಾಡಿಯ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ಮಿಶ್ರಣ ಮಾಡಿದವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಸಂಬಂಧ ನಾವು ಒಟ್ಟು 7 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿ ದ್ದೇವೆ ಎಂದರು. ಎಲ್ಲಾ ಅಂಗಡಿಗಳಲ್ಲಿ ಮೋನೋಕ್ರೋಟೊಪಾಸ್ ಕೀಟನಾಶಕ ಸುಲಭವಾಗಿ ಸಿಗುತ್ತದೆ. ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವಾಗ ಅಥವಾ ಸಿದ್ಧಪಡಿಸಿದ ನಂತರ ಎಲ್ಲರೂ ಪೂಜಾ ಕೈಂಕರ್ಯದಲ್ಲಿ

ನಿರತರಾಗಿದ್ದಾಗ ಅದರಲ್ಲಿ ಈ ವಿಷಕಾರಿ ಕೀಟನಾಶಕವನ್ನು ಬೆರೆಸಿರುವ ಸಾಧ್ಯತೆ ಇದ್ದು, ಆರೋಪಿಗಳಿಗಾಗಿ ವಿಶೇಷ ಪೊಲೀಸ್ ತನಿಖಾ ತಂಡದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಶರತ್‍ಚಂದ್ರ ತಿಳಿಸಿದರು. ಪ್ರಕರಣ ಸಂಬಂಧ ಈಗಾಗಲೇ ಸಣ್ಣಪುಟ್ಟ ಸುಳಿವುಗಳು ಸಿಗಲಾರಂಭಿಸಿವೆ. ಅದರ ಬೆನ್ನು ಹತ್ತಿ ನಿಜವಾಗಿ ಅಂದು ನಡೆದದ್ದೇನು ಎಂಬುದನ್ನು ಪತ್ತೆ ಮಾಡಲು 15 ಮಂದಿ ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಐಜಿಪಿ ‘ಮಿತ್ರ’ನಿಗೆ ತಿಳಿಸಿದರು.

ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ವಕಾಲತು ವಹಿಸದಿರಲು ಚಾ.ನಗರ ವಕೀಲರ ನಿರ್ಧಾರ

ಚಾಮರಾಜನಗರ: ಸುಳವಾಡಿ ಕಿಚ್‍ಗುತ್ ಮಾರಮ್ಮನ ದೇವ ಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತು ವಹಿಸದಿರಲು ಚಾಮರಾಜ ನಗರ ವಕೀಲರ ಸಂಘ ನಿರ್ಧರಿಸಿದೆ.

ಸುಳವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು, ನಂತರ ವಕೀ ಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಇಂದುಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು. ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆ ಸಿದ ಪ್ರಕರಣದ ಆರೋಪಿಗಳಿಗೆ ಯಾರೂ ವಕಾಲತು ವಹಿಸಬಾರದು ಎಂದು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಇಂದುಶೇಖರ್, ಸುಳ ವಾಡಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 14 ಮಂದಿ ಅಮಾ ಯಕರು ಸಾವನ್ನಪ್ಪಿದ್ದಾರೆ. 90 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 23 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಪ್ರಸಾದಕ್ಕೆ ವಿಷ ಬೆರೆಸಿರುವುದು ಘೋರ ಅಪರಾಧವಾಗಿದ್ದು, ಈ ಪ್ರಕರಣದ ಆರೋಪಿಗಳ ಪರ ವಕಾಲತು ವಹಿಸಬಾರದು ಎಂದರು. ಪ್ರಕರಣದಲ್ಲಿ ಭಾಗಿಯಾ ದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಪೊಲೀಸರು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್ ಮಾತನಾಡಿ, ಈ ಪ್ರಕರಣ ಚಾಮರಾಜನಗರ ಜಿಲ್ಲೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಘಟನೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಬೇಕು. ಆರೋಪಿಗಳ ಪರ ಯಾವುದೇ ವಕೀಲರು ವಕಾಲತು ವಹಿಸಬಾರದು ಎಂದರು.

ಸಭೆಯ ಆರಂಭದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಶಿವಪ್ರಸನ್ನ, ಜಂಟಿ ಕಾರ್ಯದರ್ಶಿ ಎಂ. ದಲಿತ್‍ರಾಜ್, ಪದಾಧಿಕಾರಿಗಳಾದ ಮಹೇಶ್‍ಕುಮಾರ್, ಆರ್. ಗಿರೀಶ್, ಸುಬ್ರಹ್ಮಣ್ಯ, ಸಿ.ಎನ್. ಮಾಧು, ಬಿ. ಪ್ರಸನ್ನಕುಮಾರ್, ಮಂಜುನಾಥಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಬಿ. ಮೋಹನ್‍ಕುಮಾರ್, ಎಂ. ನಂಜುಂಡಸ್ವಾಮಿ, ಹೆಚ್.ಬಿ. ಮಹೇಶ್, ರವಿ, ಕೆ.ಎನ್. ಸಿದ್ದರಾಜು, ಮಂಜುಳಾ ಇನ್ನಿತರರು ಭಾಗವಹಿಸಿದ್ದರು.

Translate »