ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಪತಿ ಸಾವಿನ 3 ದಿನದ ನಂತರ ಪತ್ನಿ ಸಾವು
ಮೈಸೂರು

ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಪತಿ ಸಾವಿನ 3 ದಿನದ ನಂತರ ಪತ್ನಿ ಸಾವು

December 18, 2018

ಮೈಸೂರು:  ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಮಹಿಳೆ ಇಂದು ಅಸುನೀಗಿದ್ದಾರೆ.

ವಿಷ ಪ್ರಸಾದ ಸೇವಿಸಿ ಅಸ್ವಸ್ಥ ರಾಗಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೆಪೋದೆ (ಮಾರ್ಟಳ್ಳಿ) ಗ್ರಾಮದ ಮೈಲಿಬಾಯಿ (35) ಬಹು ಅಂಗಾಂಗ ವೈಫಲ್ಯ ದಿಂದ ಮೃತಪಟ್ಟರು. ಶುಕ್ರವಾರ ಮೈಸೂರಿಗೆ ಕರೆತಂದಿದ್ದಾಗ ಗಂಭೀರ ಸ್ಥಿತಿಯಲ್ಲಿದ್ದ ಮೈಲಿಬಾಯಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದೇಹದಲ್ಲಿ ವಿಷದ ಪ್ರಮಾಣ ಹೆಚ್ಚಾಗಿ ಸೇರಿದ್ದರಿಂದ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಇಂದು ಬೆಳಿಗ್ಗೆ ಸಾವಿಗೀಡಾದರು ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಮೈಲಿಬಾಯಿ ಅವರ ಪತಿ ಕೃಷ್ಣನಾಯಕ (45) ವಿಷ ಪ್ರಸಾದ ಸೇವಿಸಿದ ದಿನವೇ ರಾತ್ರಿ ಮೃತಪಟ್ಟಿದ್ದರು. ಇದೀಗ ಅವರ ಪತ್ನಿಯೂ ಸಾವಿ ಗೀಡಾಗಿರುವುದರಿಂದ ಕೋಟೆಪೋದೆ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಲಂಬಾಣಿ ಜನಾಂಗಕ್ಕೆ ಸೇರಿದ ಮೈಲಿಬಾಯಿ, ಕೃಷ್ಣನಾಯಕ ದಂಪತಿಗೆ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗನಿದ್ದು, ಇವರು ಮೈಸೂರು, ಮಂಡ್ಯದಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದು, ವ್ಯಾಸಂಗ ಮಾಡುತ್ತಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೈಲಿಬಾಯಿ ಮೃತದೇಹ ವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಆಂಬುಲೆನ್ಸ್‍ನಲ್ಲಿ ಶವವನ್ನು ಮಾರ್ಟಳ್ಳಿಯ ಕೋಟೆಪೋದೆ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಸಂಜೆ ಗ್ರಾಮಸ್ಥರು ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಚಿವ ಜಿಟಿಡಿ ಕಂಬನಿ: ಮೈಲಿಬಾಯಿ ನಿಧನದ ಸುದ್ದಿ ಕೇಳಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಜೆಎಸ್‍ಎಸ್ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದು, ಮೃತರ ಮಕ್ಕಳಿಗೆ ಸಾಂತ್ವನ ಹೇಳಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಕಾಲು ನೋವಿನಿಂದಾಗಿ ಮೊದಲ ದಿನ ನಾನು ಬಂದಿರಲಿಲ್ಲ. ಭಾನುವಾರ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷ ಪ್ರಸಾದ ಸೇವನೆ ಅಸ್ವಸ್ಥರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿ ಸಿದ್ದೇನೆ. ಮೈಲಿಬಾಯಿ ಇಂದು ನಿಧನರಾಗಿದ್ದಾರೆ. ಮೊನ್ನೆ ಯಷ್ಟೇ ಅವರ ಪತಿ ಕೃಷ್ಣನಾಯಕ ಮೃತಪಟ್ಟಿದ್ದರು. ಮೈಲಿಬಾಯಿ ಅವರನ್ನು ಉಳಿಸಲು ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಿಡ್ನಿ ವೈಫಲ್ಯದಿಂದ ಮೈಲಿಬಾಯಿ ನಿಧನರಾಗಿದ್ದಾರೆ.

ಆರ್ಗನೋ ಪಾಸ್ಫರಸ್ (ಮೋನೋಕ್ರೋಟೊಪಾಸ್) ಕ್ರಿಮಿನಾಶಕವನ್ನು ಅನ್ನದ ನೀರಿನಲ್ಲೇ ಬೆರೆಸಿದ್ದರಿಂದ ಪ್ರತಿ ಅನ್ನದ ಅಗಳಿಗೂ ವಿಷದ ಅಂಶ ಸೇರಿದೆ. 140 ಜನರು ಅಸ್ವಸ್ಥರಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ವಿಷದ ಪ್ರಮಾಣ ಹೆಚ್ಚಾಗಿರುವುದನ್ನು ಗಮನಿಸಿದರೆ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುವ ಆತಂಕವಿತ್ತು. ವೈದ್ಯರು ಪ್ರಾಮಾಣಿಕ ಶ್ರಮದಿಂದಾಗಿ ಹಲವರ ಸಾವನ್ನು ತಡೆದಿದ್ದಾರೆ ಎಂದರು. ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇನ್ನು ನಾಲ್ಕೈದು ಮಂದಿ ಸ್ಥಿತಿ ಗಂಭೀರವಾಗಿದೆ ಎಂದರು.

ಅನ್ನದ ಪಾತ್ರೆ ನೀರಿಗೆ ವಿಷ ಮಿಶ್ರಣ..: ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಸುಳವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದದ ಸ್ಯಾಂಪಲ್‍ನ ವರದಿ ಬಂದಿದ್ದು, ಅದರಲ್ಲಿ ಆರ್ಗನೋ ಪಾಸ್ಫರಸ್ ಕ್ರಿಮಿನಾಶಕದ ಅಂಶವಿರುವುದು ಧೃಡಪಟ್ಟಿದೆ. ಹರಿಶಿನ, ತರಕಾರಿ ಬೆಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಕಾಂಡ ಕೊರೆಯುವ ಹುಳು ಸೇರಿದಂತೆ ಗಟ್ಟಿ ಹುಳಗಳ ನಿಯಂತ್ರಣಕ್ಕೆ ಈ ಕ್ರಿಮಿನಾಶಕ ಬಳಸಲಾಗುತ್ತದೆ. ಪ್ರಸಾದವಾಗಿ ನೀಡಲಾದ ಟೊಮೊಟೋ ಬಾತ್‍ನ ಪ್ರತಿ ಅನ್ನದ ಅಗಳಿಗೂ ವಿಷದ ಅಂಶ ಮಿಶ್ರಣವಾಗಿದೆ. ಅಕ್ಕಿ ತೊಳೆದ ನಂತರ ಅನ್ನದ ಪಾತ್ರೆಗೆ ಹಾಕಿದ ನೀರಿಗೇ ವಿಷ ಬೆರೆಸಿರುವ ಅನುಮಾನ ವ್ಯಕ್ತವಾಗಿದೆ. ಆರೋಪಿ ಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಬಹುದು. ಆದರೆ ಮೃತಪಟ್ಟಿರುವವರ ಕುಟುಂಬದ ಸದಸ್ಯರ ನೋವನ್ನು ಭರಿಸುವುದು ಸಾಧ್ಯವೇ? ಎಂದು ಸಚಿವ ಜಿ.ಟಿ.ದೇವೇಗೌಡ ಪ್ರಶ್ನಿಸಿದರು.

Translate »