ಕೊಳ್ಳೇಗಾಲ: ಹನೂರು ಕ್ಷೇತ್ರ ವ್ಯಾಪ್ತಿಯ ಸುಳ್ವಾಡಿ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯಾಗ ಬೇಕು, ಕೊಳ್ಳೇಗಾಲದಲ್ಲಿ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತಾಲೂಕಿನ ನಾಲ್ಕು ಸಾವಿರಕ್ಕೂ ಅಧಿಕ ಮಂದಿಯ ಸಹಿ ಸಂಗ್ರಹಿಸಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಉಪವಿಭಾಗಾಧಿ ಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಎಂಜಿ ಎಸ್‍ವಿ ಕಾಲೇಜಿನಿಂದ ಮೆರವಣಿಗೆ ತೆರಳಿದ ಪ್ರಗತಿಪರ ಸಂಘಟನೆಗಳ ಮುಖಂಡರು ಸುಳ್ವಾಡಿಯ ಕಿತ್ತಗುಚ್ಚಿ ಮಾರಮ್ಮ ದೇವಾಲಯದಲ್ಲಿ ಭಕ್ತರು ಸೇವಿಸುವ ಪ್ರಸಾದಕ್ಕೆ ವಿಷಹಾಕಿದ ಆರೋಪಿಗಳಿಗೆ ನ್ಯಾಯಾಲಯ ಶೀಘ್ರದಲ್ಲೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಪ್ರಕರಣ ಇತ್ಯರ್ಥಕ್ಕಾಗಿ ಕೊಳ್ಳೇಗಾಲದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಪ್ರಕರಣದ ವಿಚಾರಣೆ ತಡವಾದರೆ ಸಾಕ್ಷ ನಾಶವಾಗುವ ಸಾಧ್ಯತೆ ಇದ್ದು ಮಾನವ ಕುಲ ತಲೆತಗ್ಗಿಸುವ ಇಂತಹ ಘೋರ ದುರಂತಕ್ಕೆ ಕಾರಣರಾದ ಆರೋಪಿಗಳಿಗೆ ಮರಣದಂಡನೆಯಾಗ ಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟೆನಘಳ ಮುಖಂಡರುಗಳಾದ ಶೈಲೇಂದ್ರ. ಗೌಡೇಗೌಡ. ಶಿವ ಕುಮಾರ್. ಶಿವಮೂರ್ತಿ. ಮಧುವನಹಳ್ಳಿ ಬಸವರಾಜು, ಅಣಗಳ್ಳಿ ದಶರಥ್, ದಿಲೀಪ್ ಸಿದ್ದಪ್ಪಾಜಿ, ಇನ್ನಿತರರು ಇದ್ದರು.