ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದೆ ಹೆಚ್.ಡಿ.ಕುಮಾರಸ್ವಾಮಿ: ಜಿ.ಟಿ.ದೇವೇಗೌಡ ಹೊಸಬಾಂಬ್
ಮೈಸೂರು

ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದೆ ಹೆಚ್.ಡಿ.ಕುಮಾರಸ್ವಾಮಿ: ಜಿ.ಟಿ.ದೇವೇಗೌಡ ಹೊಸಬಾಂಬ್

September 16, 2019

ಮೈಸೂರು,ಸೆ.15(ಎಸ್‍ಪಿಎನ್)-ಈ ಬಾರಿ ದಸರಾ ಆಚರಿಸಲು ನನ್ನನ್ನು ಕುಮಾರ ಸ್ವಾಮಿಯವರೇ ಬಿಜೆಪಿ ಜೊತೆಗೆ ಕಳುಹಿಸಿದ್ದಾರೆ. ಈ ಹಿಂದೆ ಲೋಕಸಭಾ ಚುನಾ ವಣೆಗೂ ಬಿಜೆಪಿಗೆ ಕಳುಹಿಸಿದ್ದು ಅವರೇ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸಬಾಂಬ್ ಸಿಡಿಸಿದರು. ಮೈಸೂರು ವಿದ್ಯಾರಣ್ಯಪುರಂ ಒಕ್ಕಲಿ ಗರ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲೆ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ನನ್ನನ್ನು ಬಿಜೆಪಿ ಜೊತೆಗೆ ಕಳುಹಿಸಿದವರೇ ಹೆಚ್.ಡಿ.ಕುಮಾರಸ್ವಾಮಿ, ಅವರು ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗಲೂ ನಿಭಾಯಿಸುತ್ತೇನೆ. ಈ ಹಿಂದೆ, ಜಿಲ್ಲೆಯಲ್ಲಿ ನನ್ನ ನೇತೃತ್ವ ದಲ್ಲಿ ಪಕ್ಷ ಸಂಘಟನೆ ವಹಿಸಿದ್ದಾಗಲೂ ಉತ್ತಮವಾಗಿ ಸಂಘಟಿಸಿದ್ದೇನೆ. ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕುಮಾರ ಪರ್ವ ಹೆಸರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷವನ್ನು ಸಂಘಟಿಸಿ, 36 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಅವರು ಹೇಳಿದರು.

ಮೈತ್ರಿ ಸರ್ಕಾರ ಪತನವಾದ ನಂತರ ನಾನು ಇನ್ಮುಂದೆ ಚುನಾವಣಾ ರಾಜ ಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ. ಎಂದು ಪಕ್ಷದ ವರಿಷ್ಠರ ಮುಂದೆಯೇ ತಿಳಿಸಿದ್ದು, ಇನ್ನೂ ನನ್ನ ಪುತ್ರ ಹರೀಶ್‍ಗೌಡರನ್ನು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಅಂಶವನ್ನು ಅಲ್ಲೇ ವರಿಷ್ಠರಿಗೆ ತಿಳಿಸಿದ್ದೇನೆ. ಈ ಸಂದರ್ಭದಲ್ಲಿ ಹರೀಶ್‍ಗೌಡರ ಮೇಲೆ ಸಾ.ರಾ.ಮಹೇಶ್ ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ನೇರವಾಗಿ ನನ್ನ ಬಳಿ ಮಾತನಾಡಲಿ ಎಂದರು.

ಮಾಜಿ ಸಚಿವ ಸಾ.ರಾ.ಮಹೇಶ್ ಒಳ್ಳೆಯ ಯುವ ನಾಯಕ. ಜೆಡಿಎಸ್‍ನಲ್ಲಿ ಕುಮಾರಸ್ವಾಮಿ ಬಿಟ್ಟರೆ, ಅವರೇ ಸುಪ್ರೀಂ. ಅವರಿಗೆ ಮುಂದೆ ಒಳ್ಳೆಯ ರಾಜಕೀಯ ಭವಿಷ್ಯವಿದೆ. ನಾನು ಅವರ ರಾಜಕೀಯ ಬೆಳವಣಿಗೆಗೆ ಅಡ್ಡಗಾಲು ಹಾಕುವುದಿಲ್ಲ. ಚೆನ್ನಾಗಿ ಬೆಳೆಯಲಿ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.

 

Translate »