ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ
ಹಾಸನ

ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ

August 21, 2018

ರಾಮನಾಥಪುರ: ಇಲ್ಲಿನ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಪ್ರಾಣಿಗಳಿಗೆ ನೀಡುವಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ.

ರಾಮನಾಥಪುರದ ಸರ್ಕಾರಿ ಶಾಲೆಯೊಂದರಲ್ಲಿ ತೆರೆದಿದ್ದ ನೆರೆ ಪರಿಹಾರ ಕೇಂದ್ರಕ್ಕೆ ನಿರಾಶ್ರಿತ ಸಮಸ್ಯೆ ಆಲಿಸಲು ಶಾಸಕ ಎ.ಟಿ.ರಾಮಸ್ವಾಮಿ ಆವರೊಡನೆ ಸಚಿವ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡಲು ಮುಂದಾದರು. ಆದರೆ ಇವರ ಬಿಸ್ಕೆಟ್ ವಿತರಿಸಿದ ಪರಿ ನೋಡುಗರನ್ನು ಮುಜುಗರಕ್ಕೀಡು ಮಾಡಿತು. ನಿರಾಶ್ರಿತರ ಕೈಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡದೆ ಎಸೆಯುವ ಮೂಲಕ ಅಮಾನವೀಯತೆ ಮೆರೆದಿದರು. ಸದ್ಯ ಸಚಿವ ರೇವಣ್ಣರ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕಳೆದ 2 ದಿನಗಳ ಹಿಂದೆ ಹಾಸನ ಕೆಎಂಎಫ್‍ನಿಂದ ಸಂತ್ರಸ್ತರಿಗೆ ಸಚಿವ ಹೆಚ್.ಡಿ. ರೇವಣ್ಣ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದರು. ಆದರೆ ಭಾನುವಾರ ಗಂಜಿ ಕೇಂದ್ರಕ್ಕೆ ತೆರಳಿದ್ದ ವೇಳೆ ನಿರಾಶ್ರಿತರನ್ನು ಸಚಿವರು ಉಪಚರಿಸಿದ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮನೆ ಮಠ ಕಳೆದುಕೊಂಡು ಆಸರೆಯ ನಿರೀಕ್ಷೆಯಲ್ಲಿರುವ ಜನರು ತಾವು ಗೆಲ್ಲಿಸಿರುವ ಜನಪ್ರತಿನಿಧಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಸುತ್ತುವರೆದಿದ್ದರು. ಆದರೆ, ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತರೆಡೆಗೆ ಬಿಸ್ಕೆಟ್ ಎಸೆಯುವ ಮೂಲಕ ಪ್ರಾಣಿಗಳಂತೆ ಉಪಚರಿಸಿದ್ದಾರೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಶಾಸಕ ಎ.ಟಿ.ರಾಮಸ್ವಾಮಿ ಏನೂ ಹೇಳಲಾಗದೆ ಮೂಕ ಪ್ರೇಕ್ಷಕರಂತಾಗಿದ್ದಂತೂ ವಿಪರ್ಯಾಸ.

Translate »