ಖರ್ಗೆ ಸಿಎಂ ಆಗಬೇಕಿತ್ತು ಎಂದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್; ಹೆಚ್.ಡಿ.ರೇವಣ್ಣಗೂ ಸಿಎಂ ಆಗುವ ಅರ್ಹತೆ ಇದೆ
ಮೈಸೂರು

ಖರ್ಗೆ ಸಿಎಂ ಆಗಬೇಕಿತ್ತು ಎಂದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್; ಹೆಚ್.ಡಿ.ರೇವಣ್ಣಗೂ ಸಿಎಂ ಆಗುವ ಅರ್ಹತೆ ಇದೆ

May 17, 2019

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವ ನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಣ ವಾಕ್ ಸಮರ ನಿಲ್ಲುತ್ತಿದ್ದಂತೆಯೇ, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ನಡುವೆ ಟ್ವೀಟ್ ಸಂಘರ್ಷ ಆರಂಭವಾಗಿದೆ.

ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಬೇಕಿತ್ತು ಎಂಬ ಕುಮಾರ ಸ್ವಾಮಿ ಹೇಳಿಕೆ ಪರೋಕ್ಷವಾಗಿ ತಮಗೇ ನೀಡಿದ ಟಾಂಗ್ ಎಂದು ಭಾವಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಲೋಕೋಪಯೋಗಿ `ಸಚಿವ ಹೆಚ್.ಡಿ.ರೇವಣ್ಣಅವರೂ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ’ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಆಂತರಿಕ ಕಚ್ಚಾಟಕ್ಕೆ ವಿರಾಮ ದೊರೆಯಿತು ಎಂದುಕೊಳ್ಳುತ್ತಿದ್ದಂತೆಯೇ, ಇದು ಇನ್ನೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ನೇರವಾಗಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವೆ ಟ್ವೀಟ್ ವಾರ್ ಆರಂಭ ವಾಗಿದ್ದು, ಇಂದು ಇಡೀ ದಿನ ಸಾಮಾಜಿಕ ಜಾಲ ತಾಣಗಳಲ್ಲಿ ಪರ-ವಿರೋಧ ಹೇಳಿಕೆಗಳಿಗೆ ವೇದಿಕೆ ಮಾಡಿಕೊಟ್ಟಿತು. ಖರ್ಗೆ ಮಹಾನ್ ನಾಯಕ, ಅವರು ಯಾವತ್ತೋ ಮುಖ್ಯ ಮಂತ್ರಿ ಆಗಬೇಕಿತ್ತು, ಆದರೆ ಆಗಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ, ಮುಖ್ಯಮಂತ್ರಿ ಗಾದಿ ಮೇಲೆ ಮತ್ತೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ. ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಅವರು ಹೇಳಿದ್ದು ಸರಿಯಾಗಿದೆ, ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮುಖ್ಯಮಂತ್ರಿ ಅರ್ಹತೆಯ ಬಹಳ ಜನ ಇದ್ದಾರೆ, ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು ಎಂದಿದ್ದೇ ಕುಮಾರಸ್ವಾಮಿ ಅವರು ಕೆರಳಲು ಕಾರಣವಾಯಿತು.

ಸಿದ್ದರಾಮಯ್ಯ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಖರ್ಗೆ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ಧಿ, ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂಬ ನನ್ನ ಹೇಳಿಕೆ, ಕರ್ನಾಟಕದ ರಾಜಕೀಯ ವಾಸ್ತವತೆ ಆಧರಿಸಿದ ಮನದಾಳದ ಮಾತು. ನನ್ನ ಹೇಳಿಕೆಗೆ ರಾಜಕೀಯ ಬಣ್ಣಹಚ್ಚಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ ಎಂದು ತಿರುಗೇಟು ನೀಡಿರುವ ಕುಮಾರಸ್ವಾಮಿ, ತದ ನಂತರ ಮತ್ತೊಂದು ಟ್ವೀಟ್ ಮಾಡಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಕಿಡಿಕಾರಿದ್ದಾರೆ.

ಹೇಳಿಕೆಗಳ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ, ಖರ್ಗೆ ಅವರದು ಪಕ್ಷ, ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವು ದನ್ನು ನಾವು ಮರೆಯಬಾರದು ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

Translate »