ಅನಧಿಕೃತ ಲೋಡ್ ಶೆಡ್ಡಿಂಗ್‍ಗೆ ಸರ್ಕಾರ ನಿರ್ಧಾರ
ಮೈಸೂರು

ಅನಧಿಕೃತ ಲೋಡ್ ಶೆಡ್ಡಿಂಗ್‍ಗೆ ಸರ್ಕಾರ ನಿರ್ಧಾರ

May 17, 2019

ಬೆಂಗಳೂರು: ಬೇಸಿಗೆ ಹಾಗೂ ಬರದ ಛಾಯೆ ವಿದ್ಯುತ್ ಬೇಡಿಕೆ ಹೆಚ್ಚಿಸಿದ್ದು, ಇದನ್ನು ಪೂರೈಸಲಾಗದೆ ಸರ್ಕಾರ ಅನಧಿಕೃತ ಲೋಡ್ ಶೆಡ್ಡಿಂಗ್ ಮೊರೆ ಹೋಗಿದೆ.

ಕಳೆದ ವರ್ಷ ಇದೇ ಸಮಯ ದಲ್ಲಿ 177 ಮಿಲಿಯನ್ ಯೂನಿಟ್ ಇದ್ದ ವಿದ್ಯುತ್ ಬೇಡಿಕೆ ಇಂದು 228 ಮಿಲಿಯನ್ ಯೂನಿಟ್‍ಗೆ ಮುಟ್ಟಿದೆ. ಬೇಡಿಕೆ ಸಂದರ್ಭದಲ್ಲೇ ಬಳ್ಳಾರಿ, ಯರಮರಸ್ ಹಾಗೂ ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದು, ಕುಡಿಯುವ ನೀರು ಹಾಗೂ ಕೃಷಿ ಪಂಪ್‍ಸೆಟ್‍ಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆಗೆ ಆದೇಶಿಸಿದ್ದಾರೆ. ಅಗತ್ಯ ಕಂಡುಬಂದಲ್ಲಿ ಬೇರೆ ರಾಜ್ಯ ಮತ್ತು ಖಾಸಗಿಯವರಿಂದ ವಿದ್ಯುತ್ ಖರೀದಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೇಡಿಕೆಗೂ ಉತ್ಪಾದನೆಗೂ 30ರಿಂದ 40 ಮಿಲಿಯನ್ ಯೂನಿಟ್ ವ್ಯತ್ಯಾಸ ಇರುವ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ.

ಆದರೆ, ಅಧಿಕೃತವಾಗಿ ಇಲಾಖೆ ಲೋಡ್ ಶೆಡ್ಡಿಂಗ್ ಕುರಿತು ಪ್ರಕಟಣೆ ನೀಡಿಲ್ಲ, ರಾಜ್ಯಾದ್ಯಂತ ನಿರಂತರವಾಗಿ ಪವರ್ ಕಟ್ ಆಗುತ್ತಿದೆ. ಶರಾವತಿ ಸೇರಿದಂತೆ ರಾಜ್ಯದ ಜಲ ವಿದ್ಯುತ್ ಸ್ಥಾವರಗಳಲ್ಲಿ ಬರುವ ಜೂನ್‍ವರೆಗೆ ಉತ್ಪಾದನೆ ಮಾಡುವಷ್ಟು ನೀರು ಸಂಗ್ರಹವಿದೆ. ವಿದ್ಯುತ್ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿನಿತ್ಯ 44 ಮಿಲಿಯನ್ ಯೂನಿಟ್ ಜಲ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರ ಜೊತೆಗೆ ಸೌರವಿದ್ಯುತ್ ಉತ್ಪಾದನೆ ಸರ್ಕಾರದ ಸಂಕಷ್ಟ ಸ್ಥಿತಿಯ ನೆರವಿಗೆ ಬಂದಿದೆ, ಹಗಲಿನ ವೇಳೆ ಈ ವಿದ್ಯುತ್ ಬಳಸಿ, ಹೆಚ್ಚು ಬೇಡಿಕೆ ಸಮಯದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ.

ಕಳೆದ ಮಾರ್ಚ್ ಅಂತ್ಯದವರೆಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಳೆದ ತಿಂಗಳಿನಿಂದ, ಸುಡು ಬೇಸಿಗೆಯಿಂದ ಬೇಡಿಕೆಯೂ ಹೆಚ್ಚಾಗಿದ್ದು, ಇದನ್ನು ಪೂರೈಸಲಾಗುತ್ತಿಲ್ಲ. ಬರದ ಹಿನ್ನೆಲೆಯಲ್ಲಿ ಶೇ.40ರಿಂದ 45ರಷ್ಟು ಕೃಷಿ ಪಂಪ್‍ಸೆಟ್‍ಗಳು ನೀರಿಲ್ಲದೆ ಸ್ಥಗಿತಗೊಂಡಿದ್ದು, ಇವುಗಳ ವಿದ್ಯುತ್ ಉಳಿತಾಯವಾದರೂ, ಒಟ್ಟಾರೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇದೆ. ಮುಂಗಾರು ಮತ್ತಷ್ಟು ವಿಳಂಬವಾದರೆ ಪರಿಸ್ಥಿತಿ ಬಿಗಡಾಯಿಸಲಿದ್ದು, ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಪ್ರಕಟಿಸುವ ಅನಿವಾರ್ಯತೆಯೂ ಎದುರಾಗಬಹುದು.

Translate »