ರೇವಣ್ಣ ಅಂದು ವೈಲೆಂಟ್, ಇಂದು ಫುಲ್ ಸೈಲೆಂಟ್!
ಹಾಸನ

ರೇವಣ್ಣ ಅಂದು ವೈಲೆಂಟ್, ಇಂದು ಫುಲ್ ಸೈಲೆಂಟ್!

October 28, 2018

ಹಾಸನ: ಮಾಜಿ ಸಚಿವ ಎ.ಮಂಜು ಅವಧಿಯಲ್ಲಿ ಹಾಸನಾಂಬ ದೇವಿ ವಿಶೇಷ ದರ್ಶನ ಟಿಕೆಟ್ ದರದ ವಿಚಾರವಾಗಿ ವೈಲೆಂಟ್ ಆಗಿದ್ದ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಈ ಬಾರಿಯೂ ಅದೇ ದರ ಮುಂದುವರಿದರೂ ಯಾವುದೇ ಚಕಾರ ಎತ್ತದೆ ಫುಲ್ ಸೈಲೆಂಟ್ ಆಗಿರುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುವ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆ ಯಲು ದಿನಗಣನೆ ಆರಂಭವಾಗಿದ್ದು, ಇನ್ನೈದು ದಿನ ಬಾಕಿ ಉಳಿ ದಿದೆ. ತಾಯಿಯ ದರ್ಶನ ಪಡೆಯಲು ಪ್ರತಿ ವರ್ಷವೂ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಇಷ್ಟಾರ್ಥ ಸಿದ್ಧಿಗಾಗಿ ಅಮ್ಮನ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಹಾಸನಾಂಬೆಯ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಾಮಾನ್ಯರಿಗೆ ಧರ್ಮದರ್ಶನ ಹಾಗೂ ವಿಶೇಷ ದರ್ಶನಕ್ಕೆ 1,000 ರೂ. ಟಿಕೆಟ್ ದರ ನಿಗದಿಪಡಿಸಿತ್ತು. ಈಗಲೂ ಇದೇ ಪದ್ಧತಿ ಮುಂದುವರೆದಿದ್ದು, ಹಿಂದಿನ ಟಿಕೆಟ್ ದರವನ್ನೇ ಈಗಗಾಲೂ ನಿಗದಿಪಡಿಸಲಾಗಿದೆ. ಆದರೆ ಅಂದು ಶಾಸಕರಾಗಿದ್ದ ಹೆಚ್.ಡಿ.ರೇವಣ್ಣ ಇದೇ ದರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಅವರೇ ಜಿಲ್ಲಾ ಉಸ್ತುವಾರಿ ಯಾಗಿದ್ದರೂ ಸಹ ಮೌನವಾಗಿದ್ದು, ಸಾರ್ವಜನಿಕರಿಗೆ ಬೇಸರ ಮೂಡಿಸಿದೆ.

ಈ ಬಾರಿಯೂ ಹಾಸನಾಂಬೆ ವಿಶೇಷ ದರ್ಶನಕ್ಕೆ ಜಿಲ್ಲಾಡಳಿತ ಅದೇ 1,000 ರೂ. ವನ್ನೇ ನಿಗದಿಪಡಿಸಿದ್ದು, ಸಾಕಷ್ಟು ಹಣ ತೆತ್ತು ದೇವಿ ದರ್ಶನ ಪಡೆಯುವ ಅನಿವಾರ್ಯತೆ ಎದುರಾಗಿದೆ, ಆದರೆ ಹೆಚ್.ಡಿ.ರೇವಣ್ಣ ಮಾತ್ರ ಚಕಾರ ಎತ್ತದೆ ಇರುವುದನ್ನು ಗಮನಿಸಿದರೆ ಅಧಿಕಾರದಲ್ಲಿದ್ದಾಗ ಒಂದು ರೀತಿ, ಇಲ್ಲದಿದ್ದಾಗ ಮತ್ತೊಂದು ರೀತಿ ಎಂಬಂತಾಗಿದೆ.

ಕಳೆದ ಬಾರಿ ಎ.ಮಂಜು ಉಸ್ತುವಾರಿ ಸಚಿವರಾಗಿದ್ದಾಗ ಹಾಸನಾಂಬೆಯ ನೇರ ದರ್ಶನಕ್ಕೆ 1,000 ರೂ. ಟಿಕೆಟ್ ದರ ನಿಗದಿಪಡಿಸಿರುವುದರಿಂದ ಜನಸಾಮಾನ್ಯರಿಗೆ ಹೊರೆ ಯಾಗುತ್ತದೆ ಎಂದು ಖಂಡಿಸಿದ್ದ ರೇವಣ್ಣ ಅವರು, ಈ ಬಾರಿಯೂ ಅದೇ ದರವಿದ್ದು, ಈಗ ಜನಸಾಮಾನ್ಯರಿಗೆ ಹೊರೆ ಆಗುವುದಿಲ್ಲವೇ? ಎನ್ನುವ ಪ್ರಶ್ನೆ ಮೂಡುತ್ತಿದೆ. ಸದ್ಯ ನಿಗದಿತ ದರವನ್ನು ಕೊಂಚ ಇಳಿಸಿ ಸುಗಮವಾಗಿ ದರ್ಶನ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Translate »