ರೈತರ ಸಾಲ ಮನ್ನಾಗೆ ಶೇ.50ರಷ್ಟು ನೆರವು ನೀಡಿ: ನೀತಿ ಆಯೋಗದ ಸಭೆಯಲ್ಲಿ ಕೇಂದ್ರಕ್ಕೆ ಸಿಎಂ ಕುಮಾರಸ್ವಾಮಿ ಮನವಿ
ಮೈಸೂರು

ರೈತರ ಸಾಲ ಮನ್ನಾಗೆ ಶೇ.50ರಷ್ಟು ನೆರವು ನೀಡಿ: ನೀತಿ ಆಯೋಗದ ಸಭೆಯಲ್ಲಿ ಕೇಂದ್ರಕ್ಕೆ ಸಿಎಂ ಕುಮಾರಸ್ವಾಮಿ ಮನವಿ

June 18, 2018

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಋಣಮುಕ್ತ ರನ್ನಾಗಿಸಲು ಸಾಲ ಮನ್ನಾಗೆ ಕೇಂದ್ರ ಸರ್ಕಾರ ಶೇ.50ರಷ್ಟು ಸಹಾಯ ಧನ ಒದಗಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆದಿರುವ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಸತತ ಬರ, ಬೆಳೆ ಹಾನಿ, ಮಳೆ ಕೊರತೆ ಮತ್ತಿತರ ಕಾರಣಗಳಿಂದ ರಾಜ್ಯದ 85 ಲಕ್ಷ ರೈತರು ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲವನ್ನು ಬಾಕಿ ಉಳಿಸಿ ಕೊಂಡಿದ್ದಾರೆ. ಸಾಲ ಕಟ್ಟಲಾಗದ ಪರಿಸ್ಥಿತಿ ಯಲ್ಲಿ ರೈತರಿದ್ದಾರೆ. ಕಷ್ಟದಲ್ಲಿರುವ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ರಾಜ್ಯ ಸರ್ಕಾರ ನಡೆಸಿದೆ. ರೈತರನ್ನು ಸಾಲ ದಿಂದ ಋಣಮುಕ್ತಗೊಳಿಸಲು ಸಾಲ ಮನ್ನಾ ತೀರ್ಮಾನವನ್ನು ಮಾಡಲಾಗಿದೆ. ಈ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರ ಶೇ.50 ರಷ್ಟು ಸಹಾಯಧನ ಒದಗಿಸುವ ಮೂಲಕ ಬೆಂಬಲ ನೀಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿ ರುವ ತಮ್ಮ ನೇತೃತ್ವದ ಸರ್ಕಾರ ಜನರ ಆಶಯಗಳನ್ನು ಈಡೇರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಅಗತ್ಯ ವಿದೆ. ರಾಜಕೀಯವಾಗಿ ವಿಭಿನ್ನ ಸಿದ್ಧಾಂತ ಗಳನ್ನು ಹೊಂದಿದ್ದರೂ ಅಭಿವೃದ್ಧಿಯ ವಿಷಯ ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಮಣ್ಣು ಪರೀಕ್ಷೆಯಲ್ಲೂ ತನ್ನದೇ ಆದ ವಿಶಿಷ್ಟ ವಿಧಾನವನ್ನು ಅಳವಡಿಸಿದೆ. ಜಿ.ಐ.ಎಸ್. ಮತ್ತು ಜಿ.ಪಿ.ಎಸ್. ತಂತ್ರಜ್ಞಾನ ಬಳಸಿ ಸಾಯಿಲ್ ಸ್ಯಾಂಪಲ್ ಕಲಕ್ಟರ್ ಆಪ್‍ನ್ನು ಅಭಿವೃದ್ಧಿಪಡಿಸಿದೆ. ಕರ್ನಾಟಕ ರಾಜ್ಯದ ದತ್ತಾಂಶ ಕೇಂದ್ರದಲ್ಲಿರುವ ಮಣ್ಣಿನ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರದ ಎನ್.ಐ.ಸಿ.ಯ ಹೆಲ್ತ್‍ಕಾರ್ಡ್ ಪೆÇೀರ್ಟಲ್ ನಲ್ಲೂ ಏಕೀಕೃತಗೊಳಿಸಬೇಕಿದೆ ಎಂದರು.

ನೀರು, ಕೃಷಿ ಸೇರಿದಂತೆ ಎಲ್ಲ ವಲಯ ಗಳಿಗೂ ಅತಿ ಅವಶ್ಯವಾಗಿದ್ದು, ನೀರಿನ ಕೊರತೆಯನ್ನು ನೀಗಿಸಲು ಹಲವಾರು ಕ್ರಮಗಳನ್ನು ಕರ್ನಾಟಕ ಕೈಗೊಂಡಿದೆ. ಕೆರೆಗಳ ಪುನರುಜ್ಜೀವನದ ಕೆರೆ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿ ಜಲಮೂಲ ಗಳ ಸಂರಕ್ಷಣೆಗೂ ಗಮನ ಹರಿಸಿದೆ. ಜಲ ಸಂರಕ್ಷಣೆ ಜನಾಂದೋಲನವಾಗಬೇಕು. ಕರ್ನಾಟಕ ರಾಜ್ಯ ಸರ್ಕಾರ ಜಲಸಂರಕ್ಷಣೆಗೆ ಸಮರ್ಪಣಾ ಭಾವದಿಂದ ಕೆಲಸ ಮಾಡು ತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಸ್ವಾಸ್ಥ್ಯ ಮಿಷನ್ ಯೋಜನೆಯನ್ನು ಸ್ವಾಗತಿಸಿದ ಅವರು, ಕರ್ನಾಟಕ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಜನರ ಆರೋಗ್ಯ ರಕ್ಷಣೆಗೆ ಕಳೆದ 15 ವರ್ಷ ಗಳಿಂದ ಜಾರಿಗೊಳಿಸಿದೆ. ಕರ್ನಾಟಕ ರಾಜ್ಯದ ಈ ಯೋಜನೆ ಸುಮಾರು 30 ಲಕ್ಷ ಎಪಿಎಲ್ ಕುಟುಂಬಗಳು ಸೇರಿದಂತೆ ಎಲ್ಲ 145 ಲಕ್ಷ ಕುಟುಂಬಗಳಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಿದೆ ಎಂದರು. ಹಾಗಾಗಿ ಈ ಎರಡು ಯೋಜನೆಗಳನ್ನು ಒಳಗೊಂಡ ಏಕೀಕೃತ ಆರೋಗ್ಯ ಯೋಜನೆಯನ್ನು ಜಾರಿಗೊಳಿ ಸುವ ಪ್ರಸ್ತಾವವನ್ನು

ಅವರು ಸಭೆಯಲ್ಲಿ ಇಟ್ಟರು. ಈ ಸಭೆಯ ಕಾರ್ಯಸೂಚಿಯಲ್ಲಿ ಇಲ್ಲದಿದ್ದರೂ ಕೆಲ ವೊಂದು ವಿಷಯಗಳನ್ನು ಪ್ರಸ್ತಾಪಿಸುವ ಅಗತ್ಯವಿದೆ. ಪ್ರಮುಖವಾಗಿ ಯುವಕರಿಗೆ ಉದ್ಯೋಗ ಒದಗಿಸಲು ಬಂಡವಾಳ ಹೂಡಿಕೆಯನ್ನು ಆಕರ್ಷಿಸಬೇಕಿದೆ. ಹಾಗೆಯೇ ಕೌಶಲ್ಯ ಅಭಿವೃದ್ಧಿಯೂ ಅಷ್ಟೇ ಮುಖ್ಯ ಎಂದು ಅವರು ಹೇಳಿ, ಕರ್ನಾಟಕ ಈ ನಿಟ್ಟಿನಲ್ಲಿ ಗಮನಹರಿಸಿದೆ. ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ನೀತಿ ಆಯೋಗದ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು. ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಿದೆ.

ಪ್ರತಿ ವರ್ಷ ಪ್ರಕೃತಿ ವಿಕೋಪಗಳು ಆಗುತ್ತಲೇ ಇವೆ. ಕಳೆದ 5 ವರ್ಷಗಳಲ್ಲಿ ರಾಜ್ಯ ಪ್ರಕೃತಿ ವಿಕೋಪ ನಿಧಿಯಡಿ ಒದಗಿಸಲಾಗಿದ್ದ 6 ಪಟ್ಟು ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಇದು ರಾಜ್ಯಗಳಿಗೆ ಆರ್ಥಿಕ ಹೊರೆಯಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಹಣ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, 2015-2020ರ ಅವಧಿಗೆ ರಾಜ್ಯಕ್ಕೆ ಪ್ರಕೃತಿ ವಿಕೋಪ ನಿಧಿಯಡಿ 1375 ಕೋಟಿ ರೂ.ಗಳನ್ನು ಹಂಚಲಾಗಿದೆ. ಇದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ಇದನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು. ನೀತಿ ಆಯೋಗದ ಕಾರ್ಯಸೂಚಿಯಲ್ಲಿ ನಗರಾಭಿವೃದ್ಧಿ ಕಾರ್ಯತಂತ್ರಗಳನ್ನು ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ನೀತಿ ಆಯೋಗ ಅಭಿವೃದ್ಧಿಯ ಅಸಮಾನತೆಗಳನ್ನು ನಿವಾರಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

Translate »