ಕಪಿಲಾ ನದಿ ಪ್ರವಾಹದಿಂದ ಕೊಚ್ಚಿ ಹೋದ ಭತ್ತದ ಫಸಲು: ನೀರಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ರೈತ
ಮೈಸೂರು

ಕಪಿಲಾ ನದಿ ಪ್ರವಾಹದಿಂದ ಕೊಚ್ಚಿ ಹೋದ ಭತ್ತದ ಫಸಲು: ನೀರಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ರೈತ

June 18, 2018

ಮೈಸೂರು/ನಂಜನಗೂಡು: ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹದಿಂದ ಭತ್ತದ ಬೆಳೆ ಕೊಚ್ಚಿ ಹೋದ ಪರಿಣಾಮ ಕಪಿಲಾ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ರೈತನೊಬ್ಬನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಭಾನುವಾರ ಬೆಳಿಗ್ಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುಪ್ಪರವಳ್ಳಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದ ಬಸವಯ್ಯ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ಗ್ರಾಮದ ಕೆಲ ಯುವಕರು ತಕ್ಷಣವೇ ನೀರಿನಿಂದ ಆವೃತವಾಗಿದ್ದ ಕಪಿಲಾ ನದಿ ಅಂಚಿನ ಗದ್ದೆಗೆ ಧಾವಿಸಿ ಮುಳುಗಲೆತ್ನಿಸಿದ ಬಸವಯ್ಯ ಅವರನ್ನು ದಡಕ್ಕೆ ಎಳೆತಂದು ರಕ್ಷಿಸಿದ್ದಾರೆ.

ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅವಧಿಗೂ ಮುನ್ನವೇ ಅಣೆಕಟ್ಟು ತುಂಬಿದೆ. ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ ನಾಲ್ಕು ಗೇಟ್‍ಗಳಿಂದ ಭಾರೀ ಪ್ರಮಾಣದ ನೀರು ಕಪಿಲಾ ನದಿಗೆ ಬಿಡುತ್ತಿದ್ದು, ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರು ಪ್ರವಾಹದ ಪರಿಸ್ಥಿತಿಯನ್ನು ಉಂಟುಮಾಡಿದ್ದು, ನದಿಯ ಎರಡು ಬದಿಗಳಲ್ಲಿರುವ ಗದ್ದೆಗಳು ಜಲಾವೃತಗೊಂಡಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.

ಕಪಿಲಾ ನದಿಯಲ್ಲಿ ಕಳೆದ ಎರಡು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಾಗಿದ್ದು, ನದಿಯ ಆಸುಪಾಸಿನಲ್ಲಿರುವ ಗದ್ದೆಗಳ ಮೇಲೂ ಮೂರ್ನಾಲ್ಕು ಅಡಿ ನೀರು ತುಂಬಿ ಹರಿಯತೊಡಗಿದೆ. ಕುಪ್ಪರವಳ್ಳಿ ಗ್ರಾಮದ ಬಸವಯ್ಯ ಅವರಿಗೆ ಸೇರಿದ ಮೂರು ಎಕರೆ ಗದ್ದೆ ನದಿಯ ದಡದಲ್ಲಿಯೇ ಇದ್ದು, ಭತ್ತದ ಬೆಳೆ ಹುಲುಸಾಗಿ ಬೆಳೆದಿತ್ತು. ಆದರೆ ನದಿಯಲ್ಲಿ ಉಂಟಾದ ಪ್ರವಾಹ ಬಸವಯ್ಯ ಅವರ ಭತ್ತದ ಬೆಳೆಯನ್ನು ಕೊಚ್ಚಿಕೊಂಡು ಹೋಗಿದ್ದು, ಇದರಿಂದ ಭಾರಿ ನಷ್ಟ ಸಂಭವಿಸಿದೆ. ಇಂದು ಬೆಳಿಗ್ಗೆ ಗದ್ದೆಯ ಬಳಿ ಬಂದ ಬಸವಯ್ಯ ಅವರಿಗೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವುದು ಆಘಾತವನ್ನುಂಟು ಮಾಡಿದೆ. ಇದರಿಂದ ಆತ್ಮಸ್ಥೈರ್ಯ ಕಳೆದುಕೊಂಡ ಅವರು, ನೀರಿನಲ್ಲಿ ಮುಳುಗಡೆಯಾಗಿದ್ದ ಗದ್ದೆಗೆ ತೆರಳಿ ಚೀರಾಡತೊಡಗಿದ್ದಾರೆ.

ಇದನ್ನು ಕಂಡ ಸ್ಥಳೀಯರು ಸಮಾಧಾನ ಮಾಡಿಕೊಳ್ಳುವಂತೆ ಸಂತೈಸಿದರೂ, ಯಾರ ಮಾತಿಗೂ ಕಿವಿಗೊಡದ ಬಸವಯ್ಯ, ನೇರವಾಗಿ ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗ್ರಾಮದ ಇಬ್ಬರು ಯುವಕರು ನೀರಿನಲ್ಲಿ ಮುಳುಗುತ್ತಿದ್ದ ಬಸವಯ್ಯ ಅವರನ್ನು ದಡಕ್ಕೆ ಎಳೆತಂದು ರಕ್ಷಿಸಿದ್ದಾರೆ. ರೈತ ಬಸವಯ್ಯ ಅವರ ಆತ್ಮಹತ್ಯೆ ಯತ್ನದ ದೃಶ್ಯವನ್ನು ಅಲ್ಲಿಯೇ ಇದ್ದವರು ಮೊಬೈಲ್‍ಗಳಲ್ಲಿ ವೀಡಿಯೊ ಮಾಡಿದ್ದು, ಅದು ವೈರಲ್ ಆಗಿದೆ.

ಪರಿಶೀಲನೆ: ಬೆಳೆ ನಷ್ಟದಿಂದಾಗಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರು ಉಪ ವಿಭಾಗಾಧಿಕಾರಿ ಹೆಚ್.ಎನ್. ಶಿವೇಗೌಡ ಅವರು ಕುಪ್ಪರವಳ್ಳಿಗೆ ತೆರಳಿ ನೊಂದ ರೈತ ಬಸವಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಆಲಿಸಿದರಲ್ಲದೆ, ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕದಂತೆ ಮನವಿ ಮಾಡಿದರು. ಬಳಿಕ ಕಂದಾಯಾಧಿಕಾರಿ ಮಹದೇವ ಪ್ರಸಾದ್, ಕೃಷಿ ಇಲಾಖೆ ಅಧಿಕಾರಿ ವಿರೂಪಾಕ್ಷ ಹಾಗೂ ಇನ್ನಿತರರೊಂದಿಗೆ ಕುಪ್ಪರವಳ್ಳಿ, ಬಿಳುಗಲಿ, ಬೊಕ್ಕಳ್ಳಿ, ಸುತ್ತೂರು, ನಗರ್ಲೆ ಸೇರಿದಂತೆ ನಂಜನಗೂಡು ತಾಲೂಕಿನ ಕಪಿಲಾ ನದಿ ದಂಡೆಯಲ್ಲಿರುವ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ನಷ್ಟವನ್ನು ಅವಲೋಕಿಸಿದರಲ್ಲದೇ, ಬೆಳೆ ನಷ್ಟಕ್ಕೊಳಗಾದ ರೈತರೊಂದಿಗೆ ಸಂವಾದ ನಡೆಸಿ ಆತ್ಮಸ್ಥೈರ್ಯ ತುಂಬಿದರಲ್ಲದೇ ಪರಿಹಾರ ನೀಡುವ ಭರವಸೆ ನೀಡಿದರು.

ಸತತ ನಷ್ಟದಿಂದ ನೊಂದಿದ್ದೇನೆ

ಕಳೆದ ಎರಡು ವರ್ಷದಿಂದ ಉಂಟಾದ ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಎರಡು ವರ್ಷದಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಸಾಲದ ಸುಳಿಯಲ್ಲಿ ಸಿಲುಕಿದ್ದ ನಾನು ಈ ವರ್ಷ ತನ್ನ ಗದ್ದೆಯಲ್ಲಿ ಭತ್ತದ ಬೆಳೆ ಬೆಳೆದಿದ್ದೆ. ಈ ಬಾರಿ ಫಸಲು ಉತ್ತಮವಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನದಿಂದ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಭತ್ತದ ಬೆಳೆಯೆಲ್ಲಾ ಕೊಚ್ಚಿ ಹೋಗಿದೆ. ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಫಸಲು ಎಲ್ಲಾ ಹಾನಿಯಾಗಿರುವುದರಿಂದ ಜೀವನವೇ ಹೋದಂತಾಗಿದೆ. ಇದರಿಂದ ನನಗಾದ ಆಘಾತ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. – ಬಸವಯ್ಯ, ಕುಪ್ಪರವಳ್ಳಿಯ ಬೆಳೆ ಹಾನಿಗೊಳಗಾದ ರೈತ

ನಾಳೆ ಪರಿಹಾರ ನೀಡುತ್ತೇವೆ

ಕಪಿಲಾ ನದಿಯಿಂದ ಉಂಟಾದ ಪ್ರವಾಹದಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರೋರ್ವರು ಆತ್ಮಹತ್ಯೆಗೆ ಮುಂದಾಗಿದ್ದರು ಎಂಬ ಸುದ್ದಿ ತಿಳಿದು ಇಂದು ಮಧ್ಯಾಹ್ನ ಕುಪ್ಪರವಳ್ಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ರೈತ ಬಸವಯ್ಯ ಅವರ ನಿವಾಸಕ್ಕೂ ತೆರಳಿ ಆತ್ಮಸ್ಥೈರ್ಯ ತುಂಬಿದ್ದೇವೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳದಂತೆ ಹಾಗೂ ಯಾವ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸರ್ಕಾರದ ಗೈಡ್‍ಲೈನ್ಸ್‍ನಂತೆ ಬಸವಯ್ಯ ಅವರಿಗೆ ಹೆಕ್ಟೇರ್‍ಗೆ 13500 ರೂ. ಪರಿಹಾರವನ್ನು ನಾಳೆ (ಜೂ.18) ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈತರು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ದುಸ್ಸಹಾಸಕ್ಕೆ ಕೈಹಾಕಬಾರದು ಎಂದು ಮನವಿ ಮಾಡಿದ್ದೇನೆ. – ಹೆಚ್.ಎನ್.ಶಿವೇಗೌಡ, ಉಪ ವಿಭಾಗಾಧಿಕಾರಿಗಳು

 

Translate »