ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು
ಚಾಮರಾಜನಗರ

ರೈತರ ಸಂಕಷ್ಟ ನೋಡಿ ಹೆಚ್‍ಡಿಕೆ ಕಣ್ಣೀರು

July 26, 2018

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಂಕಷ್ಟ ನೋಡಿ ಬಹಿರಂಗ ಸಮಾರಂಭದಲ್ಲಿ ಅತ್ತಿದ್ದಾರೆ. ಆದರೆ ಬಿಜೆಪಿಯವರು ಬೇರೆ ಬೇರೆ ಕಾರಣಗಳಿಗಾಗಿ ಬಾಗಿಲು ಹಾಕಿ ಕೊಂಡು ಅಳುತ್ತಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಬಿಜೆಪಿ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು.

ಕೊಳ್ಳೇಗಾಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆದವರೆಗೂ ಹೃದಯ ಮತ್ತು ಮನ ಸಾಕ್ಷಿ ಅನ್ನೋದು ಇರುತ್ತದೆ. ನೋವಾದ ಸಂದರ್ಭದಲ್ಲಿ ಕಣ್ಣೀರು ಬಂದಿರುತ್ತದೆ. ಆದರೆ ಇದನ್ನೇ ಟೀಕಿಸುವ ಮಟ್ಟಕ್ಕೆ ಬಿಜೆಪಿ ಮುಖಂಡರು ಇಳಿಯಬಾರದಿತ್ತು ಎಂದು ತಿರುಗೇಟು ನೀಡಿದರು.

ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವ ಮೊದಲು ಕೇಂದ್ರ ಸರ್ಕಾರದ ಬಗ್ಗೆ ಮಾತಾಡಲಿ. ನಾಲ್ಕು ವರ್ಷದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ಅವರು ಯೋಚಿಸಲಿ ಎಂದರು.

Translate »