ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ: 18,950 ಮಂದಿಗೆ ತಪಾಸಣೆ
ಹಾಸನ

ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ: 18,950 ಮಂದಿಗೆ ತಪಾಸಣೆ

February 17, 2019
  • ಹರಿದು ಬಂದ ಜನ ಸಾಗರ
  •  600 ವೈದ್ಯರು, 2000 ಸಿಬ್ಬಂದಿ ಕರ್ತವ್ಯ ನಿರ್ವಹಣೆ

ಹಾಸನ: ಗ್ರಾಮೀಣ ಭಾಗದ ಜನರ ಅನುಕೂಲ ಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸ ಲಾಗಿದ್ದ ಬೃಹತ್ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, ಸಾವಿರಾರು ಜನರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಬೆಂಗಳೂರಿನ ನಿಮಾನ್ಸ್, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಗ್ರಂಥಿ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಬೆಂಗಳೂರು ದಂತ ಚಿಕಿತ್ಸಾ ಲಯ, ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಹಾಸನ ನಗರದ ಹಲವು ಖಾಸಗಿ ಆಸ್ಪತ್ರೆಗಳ ವೈದ್ಯರು ಸೇರಿ ದಂತೆ ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ 600 ತಜ್ಞ ವೈದ್ಯರು, 2000 ಪ್ಯಾರಾಮೆಡಿಕಲ್ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸಿದರು.

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ಕ್ಯಾನ್ಸರ್ ತಪಾಸಣೆಗಾಗಿ ವಿಶೇಷ ಸಾಧನ ಗಳನ್ನು ಅಳವಡಿಸಿಕೊಂಡಿದ್ದ ಬಸ್ ಕೂಡ ಆಗಮಿಸಿತ್ತು. ನೂರಾರು ಮಂದಿ ಇದರ ಸೇವೆಯ ಲಾಭ ಪಡೆದುಕೊಂಡರು.

1,500ಕ್ಕೂ ಅಧಿಕ ಮಂದಿ ಅಧಿಕೃತ ನೋಂದಣಿ ಮಾಡಿಸಿ ಆರೋಗ್ಯ ತಪಾ ಸಣೆಗೆ ಒಳಪಟ್ಟರು. ಇದಲ್ಲದೆ ಇನ್ನೂ ಸಾವಿ ರಾರು ಮಂದಿ ಸಾಮಾನ್ಯ ತಪಾಸಣೆಗೆ ಒಳಪಟ್ಟಿದ್ದಾರೆ. 2,000 ಮಂದಿಗೆ ಇಸಿಜಿ, 500 ಮಂದಿಗೆ ಹೃದ್ರೋಗ ತಪಾಸಣೆ 550 ಮಂದಿಗೆ ಅಲ್ಟ್ರಾ ಸೌಂಡ್ ತಪಾ ಸಣೆ 8,000 ಮಂದಿಗೆ ಮಧುಮೇಹ ತಪಾಸಣೆ ಮಾಡಲಾಗಿದೆ. ಶಂಕಿತ 50 ಪ್ರಕರಣಗಳಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಕೂಡ ನಡೆಸಲಾಗಿದೆ. 1,350 ಮಂದಿ ಆಯುಷ್ ಚಿಕಿತ್ಸೆ ಹಾಗೂ 4,000 ಮಂದಿ ದಂತ ತಪಾಸಣೆ ಒಟ್ಟಾರೆ 18,950 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ದಾಸ್ತಾನು ಜೊತೆಗೆ ಖಾಸಗಿ ಔಷಧ ಸರಬರಾಜುದಾರರ ಮೂಲಕ ಕೊಡುಗೆ ರೂಪದಲ್ಲಿ ಸುಮಾರು 3 ಕೋಟಿ ರೂಪಾಯಿಯ ಔಷಧಿಗಳು ಪೂರೈಕೆ ಯಾಗಿದ್ದು ವೈದ್ಯರ ತಪಾಸಣೆ ಚೀಟಿ ಯನುಸಾರ ಅವುಗಳನ್ನು ಸಾರ್ವ ಜನಿಕರಿಗೆ ವಿತರಿಸಲಾಯಿತು.

ಜಿಲ್ಲಾ ಹಾಕಿ ಕ್ರೀಡಾಂಗಣ, ವಾಲಿಬಾಲ್ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂ ಗಣದಲ್ಲಿ ಆರೋಗ್ಯ ಮೇಳದ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್ ಮಾಹಿತಿ ನೀಡಿದ್ದಾರೆ.

ಗಮನ ಸೆಳೆದ ವಾರ್ತಾ ಇಲಾಖೆ ಮಳಿಗೆ: ಆರೋಗ್ಯ ಮೇಳದ ಮಳಿಗೆಗಳ ಜೊತೆ ಯಲ್ಲಿಯೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿ ಸಿದ್ದ ರಾಜ್ಯ ಸರ್ಕಾರದ ಯೋಜನೆಗಳ ಹಾಗೂ ಸಾಧನೆಗಳನ್ನು ಬಿಂಬಿಸುವ ಮಾಹಿತಿ ಮಳಿಗೆ ಗಮನ ಸೆಳೆಯಿತು.

ಊಟೋಪಚಾರ: ಆರೋಗ್ಯ ಮೇಳಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಅಚ್ಚುಕಟ್ಟಾದ ಉಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿಗೆ ಬೆಳಿಗ್ಗೆ 10.30 ರಿಂದಲೇ ಆಹಾರವನ್ನು ವಿತರಿಸಲಾ ಯಿತು. ಸ್ವಚ್ಛತೆಗೂ ಆದ್ಯತೆ ನೀಡಲಾಗಿತ್ತು. ಮೈದಾನದಲ್ಲೇ ಹಾಜರಿದ್ದು ಮೇಳದ ಉಸ್ತುವಾರಿ ನೋಡಿಕೊಂಡ ಸಚಿವರು: ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಬೆಳಿಗ್ಗೆ 8.45 ರಿಂದಲೂ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿದ್ದು ಪ್ರತಿ ಯೊಂದು ವ್ಯವಸ್ಥೆಯನ್ನು ಪರಿಶೀಲಿಸಿದರು.
ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ವ್ಯವಸ್ಥೆ ಮಾಡು ವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡು ವುದರ ಜೊತೆಗೆ ಸ್ವತಃ ಹಾಜರಿದ್ದು ಸಾರ್ವ ಜನಿಕರಿಗೆ ಮಾರ್ಗದರ್ಶನ ನೀಡಿದರು.

ಆರೋಗ್ಯ ತಪಾಸಣಾ ಶಿಬಿರದ ಮುಕ್ತಾಯದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಯಶ ಸ್ಸಿಗೆ ಸಹಕರಿಸಿದ ಮತ್ತು ಶ್ರಮಿಸಿದ ಎಲ್ಲಾ ವೈದ್ಯಾಧಿಕಾರಿಗಳಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಔಷಧ ಪೂರೈಸಿದ ಸಂಸ್ಥೆಗಳ ಪ್ರತಿ ನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಆರೋಗ್ಯ ಮೇಳ ಉದ್ಘಾಟಿಸಿ ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ, ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಪೌರಾಯುಕ್ತ ಪರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪುಟ್ಟಸ್ವಾಮಿ, ಉಪಕಾರ್ಯದರ್ಶಿ ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು..

Translate »