ಮಂಡ್ಯ: ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮ ನಾದ ಮಂಡ್ಯ ಯೋಧ ಗುರು ಅವರ ಕುಟುಂಬಕ್ಕೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಅರ್ಧ ಎಕರೆ ಭೂಮಿ ಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಡ್ಯದಲ್ಲಿರುವ ತಮ್ಮ ಒಡೆತನದ ಜಮೀನಿನಲ್ಲಿ ಅರ್ಧ ಎಕರೆ ಭೂಮಿ ಯನ್ನು ಯೋಧನ ಕುಟುಂಬಕ್ಕೆ ಹಸ್ತಾಂತರಿಸಲು ತೀರ್ಮಾನಿಸಿದ್ದಾರೆ.
ಮಂಡ್ಯದ ಸೊಸೆಯಾಗಿರುವ ನನ್ನದು ದೇಶ ಕಾಯುವ ಯೋಧರಿಗಾಗಿ ಅಳಿಲು ಸೇವೆ ಎಂದಿರುವ ಸುಮಲತಾ ತಾವು ನೀಡಿದ ಭೂಮಿಯನ್ನು ಯೋಧ ಗುರುವಿನ ಕುಟುಂಬ ತಮ್ಮ ಜೀವನ ನಿರ್ವಹಣೆಗೆ ಬಳಸಿಕೊಳ್ಳಲಿ ಎಂದು ಆಶಿಸಿದ್ದಾರೆ.
ಸುಮಲತಾ ಅವರು ನೀಡಿದ ಭೂಮಿ ಉತ್ತಮ ನೀರಾವರಿ ಜಮೀನಾಗಿದ್ದು ಕೃಷಿ ಕಾರ್ಯಗಳಿಗೆ ಯೋಗ್ಯವಾಗಿದೆ. ಪುತ್ರ ಅಭಿಷೇಕ್ ಅವರ “ಅಮರ್” ಚಿತ್ರದ ಶೂಟಿಂಗ್‍ಗಾಗಿ ವಿದೇಶದಲ್ಲಿರುವ ಸುಮಲತಾ ಅಲ್ಲಿಂದಲೇ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.
ನಾನು ಮಲೇಷಿಯಾದಲ್ಲಿದ್ದು, ಗುರುವಿನ ಅಂತ್ಯಸಂಸ್ಕಾ ರಕ್ಕೆ ಆಗಮಿಸಲು ಆಗುತ್ತಿಲ್ಲ. ಸೋಮವಾರ ಇಲ್ಲವೇ ಮಂಗಳವಾರ ಭಾರತಕ್ಕೆ ಆಗಮಿಸಿದ ತಕ್ಷಣ ಗುರುವಿನ ಕುಟುಂಬವನ್ನು ಭೇಟಿಯಾಗುತ್ತೇನೆ. ತಮ್ಮ ಪತಿ ಅಂಬರೀಶ್ ಇಂದು ಇದ್ದಿದ್ದರೆ ಇದಕ್ಕಿಂತ ಹೆಚ್ಚಿನ ನೆರವು ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಹುತಾತ್ಮ ಯೋಧ ಗುರುವಿನ ಕುಟುಂಬಕ್ಕೆ ಭೂಮಿ ಹಸ್ತಾಂತರಿಸುವ ಸಂಬಂಧ ಅಂಬರೀಶ್ ಅವರ ಅಣ್ಣನ ಮಗ ಮದನ್ ಅವರೊಡನೆ ಸುಮಲತಾ ಮಾತನಾಡಿದ್ದು, ಈ ಕೂಡಲೇ ನೋಂದಣಿ ಮಾಡಿಸಿಕೊಡುವುದಕ್ಕೆ ಹೇಳಿದ್ದಾರೆ.