ಕೇರಳದಲ್ಲಿ ಭಾರೀ ಮಳೆ: ಮುನ್ನಾರ್ ರೆಸಾರ್ಟ್‍ನಲ್ಲಿ ಸಿಲುಕಿರುವ 70 ಪ್ರವಾಸಿಗರು
ದೇಶ-ವಿದೇಶ

ಕೇರಳದಲ್ಲಿ ಭಾರೀ ಮಳೆ: ಮುನ್ನಾರ್ ರೆಸಾರ್ಟ್‍ನಲ್ಲಿ ಸಿಲುಕಿರುವ 70 ಪ್ರವಾಸಿಗರು

August 11, 2018

ತಿರುವನಂತಪುರಂ:  ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಭೂಕುಸಿತ ಉಂಟಾ ಗಿದ್ದು, ಪ್ರಸಿದ್ದ ಪ್ರವಾಸಿತಾಣ ಮುನ್ನಾರ್ ರೆಸಾರ್ಟ್‍ನ ಮಾರ್ಗಗಳು ಮುಚ್ಚಿ ಹೋಗಿದೆ. ಸಧ್ಯ ಅಲ್ಲಿ 70 ಪ್ರವಾಸಿಗರು ಸಿಲುಕಿಕೊಂಡಿದ್ದು, ಇದ ರಲ್ಲಿಯೂ 20 ವಿದೇಶಿಯರು ಇದ್ದಾರೆ ಎಂದು ಹೇಳಲಾಗಿದೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನ್ಯವು ಹೆಲಿ ಕಾಪ್ಟರ್ ಬಳಸಿಕೊಂಡು ಹೆಚ್ಚುವರಿ ಪ್ರವಾಸಿಗರನ್ನು ಸ್ಥಳಾಂತರಿಸಿದೆ. ಮಳೆ ಮತ್ತು ಪ್ರವಾಹ ದಿಂದಾಗಿ ಅಪಾರ ಹಾನಿಗೊಳಗಾದ ಕೇರಳಕ್ಕೆ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ಸಾಧ್ಯವಿರುವ ಎಲ್ಲಾ ಸಹಾಯವನ್ನೂ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇದುವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರವಾಣಿ ಕರೆ ಮಾಡಿ ನೆರವಿನ ಭರವಸೆ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿಗಳೊಡನೆ ದೂರವಾಣಿಯಲ್ಲಿ ಮಾತನಾಡಿ ಪ್ರವಾಹ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವ ಭರವಸೆಯನ್ನು ಒದಗಿಸಿದ್ದೇವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಸೇರಿ ಎಲ್ಲಾ ಚಟುವಟಿಕೆಗಳಿಗೆ ನೆರವು ನೀಡಲಾಗುವುದು ಎಂದು ರಾಜನಾಥ್‍ಸಿಂಗ್ ಟ್ವೀಟ್ ಮಾಡಿದ್ದಾರೆ. ನೈಋತ್ಯ ಮಾನ್ಸೂನ್ ಕೇರಳದ ಮೇಲೆ ತೀವ್ರವಾದ ಪರಿಣಾಮ ಬೀರಿದೆ, ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತದೆ. ಇಡುಕ್ಕಿ ಪ್ರದೇಶದಲ್ಲಿ 11 ಮಂದಿ ಸೇರಿ ರಾಜ್ಯಾದ್ಯಂತ ಮಳೆಗೆ 26 ಮಂದಿ ಸಾವನ್ನಪ್ಪಿದ್ದಾರೆ.

Translate »