ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸಅರ್ವೆ ನಂ.41ರ ನಿವಾಸಿಗಳಿಂದ ಇಂದು ಮುಖ್ಯಮಂತ್ರಿ ಭೇಟಿ
ಮೈಸೂರು

ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸಅರ್ವೆ ನಂ.41ರ ನಿವಾಸಿಗಳಿಂದ ಇಂದು ಮುಖ್ಯಮಂತ್ರಿ ಭೇಟಿ

August 11, 2018

ಮೈಸೂರು: ಕಳೆದ ಆರು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರಲ್ಲಿ ವಾಸವಿರುವ ಸಾವಿರಾರು ನಿವಾಸಿಗಳು ನಾಳೆ (ಆ.11) ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಿದ್ದಾರೆ.

ಮೈಸೂರಿನ ಇನ್ಫೋಸಿಸ್ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗಳು ನಾಳೆ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನ ಪಿಂಜರಾಪೋಲ್‍ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಕುರುಬಾರಹಳ್ಳಿ ಸರ್ವೆ ನಂ.4ರ ನಿವಾಸಿಗಳ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರಲ್ಲಿ ಬರುವ ಭೂಮಿ
ಬಿ-ಖರಾಬಿಗೆ (ಸರ್ಕಾರಿ ಜಮೀನು) ಒಳಪಡುತ್ತದೆ ಎಂದು 6 ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಈ ಸರ್ವೆ ನಂಬರ್‍ಗಳಲ್ಲಿ ಬರುವ ಕೆ.ಸಿ.ನಗರ, ಜೆ.ಸಿ.ನಗರ, ಸಿದ್ಧಾರ್ಥ ನಗರ, ಆಲನಹಳ್ಳಿ ಹಾಗೂ ಆದಾಯ ತೆರಿಗೆ ಬಡಾವಣೆಯ ಮನೆಗಳು ಹಾಗೂ ನಿವೇಶನಗಳಿಗೆ ಖಾತಾ ಬದಲಾವಣೆ, ಮನೆ ನಿರ್ಮಿಸಲು ಲೈಸೆನ್ಸ್ ಸೇರಿದಂತೆ ಯಾವುದೇ ರೀತಿಯ ದಾಖಲೆಗಳನ್ನು ನೀಡಬಾರದು ಎಂದು ಆದೇಶದಲ್ಲಿ ತಿಳಿಸಿದ್ದರಿಂದ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸುವುದಾಗಲೀ, ನಿರ್ಮಿಸಿರುವ ಮನೆ ರಿಪೇರಿ ಮಾಡುವುದಾಗಲೀ, ತಮ್ಮ ನಿವೇಶನ ಅಥವಾ ಮನೆಯನ್ನು ಮಾರಾಟ ಮಾಡುವುದಕ್ಕಾಗಲೀ ಇಲ್ಲವೇ ತಮ್ಮ ವಾರಸುದಾರರಿಗೆ ಪರಭಾರೆ ಮಾಡಲು ಸಹ ಸಾಧ್ಯವಾಗದೇ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯಲ್ಲಿ ಬರುವ ಬಡಾವಣೆ ನಿವಾಸಿಗಳ ಹಿತ ರಕ್ಷಣಾ ಸಮಿತಿ ರಚಿಸಿಕೊಂಡು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದು ಮಾತ್ರವಲ್ಲದೇ, ರಸ್ತೆ ತಡೆಯಂತಹ ಹೋರಾಟಗಳನ್ನೂ ನಡೆಸಿದ್ದರು. ಕಳೆದ ಮಾರ್ಚ್‍ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತಾದರೂ, ಈ ಸಂಬಂಧ ಇದುವರೆಗೂ ಸರ್ಕಾರಿ ಆದೇಶ ಹೊರಡಿಸದೇ ಇದ್ದ ಕಾರಣ ನಿವಾಸಿಗಳ ಸಂಕಷ್ಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಿದ್ದಾರೆ.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ನಿವಾಸಿಗಳ ಹಿತ ರಕ್ಷಣಾ ಸಮಿತಿ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್, ಈ ಬಡಾವಣೆಗಳನ್ನು ಬಿ-ಖರಾಬಿನಿಂದ ಸಂಪುಟ ಸಭೆಯಲ್ಲಿ ಕೈಬಿಡಲಾಗಿದೆ ಎಂದು ಹೇಳಿರುವುದು ಅಂದಿನ ಕಾಂಗ್ರೆಸ್ ಸರ್ಕಾರದ ರಾಜಕೀಯ ಗಿಮ್ಮಿಕ್. ಈಗ ನಿವಾಸಿಗಳು ಹತಾಶರಾಗಿದ್ದಾರೆ. ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಬಂಧಪಟ್ಟ ದಾಖಲೆಗಳೊಂದಿಗೆ ಸರ್ಕಾರಕ್ಕೆ ವರದಿ ತಲುಪಿದೆ. ಆದರೆ ಸಂಪುಟ ಸಭೆಯ ನಿರ್ಧಾರದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಯಾವುದೇ ರೀತಿಯ ಮಾಹಿತಿ ಇನ್ನು ಬಂದಿಲ್ಲ ಹಾಗೂ ಸರ್ಕಾರಿ ಆದೇಶವೂ ಹೊರಬಿದ್ದಿಲ್ಲ ಎಂದರು. ನಾಳೆ ಇಲ್ಲಿನ ನಿವಾಸಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಿದ್ದೇವೆ. ಆ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್ ಮತ್ತು ಎಲ್.ನಾಗೇಂದ್ರ ಕೂಡ ನಿವಾಸಿಗಳ ಜೊತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ ಆ.12ರಂದು ಚುನಾಯಿತ ಪ್ರತಿನಿಧಿಗಳೊಡಗೂಡಿ ವಿಧಾನಸೌಧ ಎದುರು ನಿವಾಸಿಗಳು ಧರಣಿ ನಡೆಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಲಿದ್ದೇವೆ ಎಂದರು.

ನಾಳೆ ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಿವಾಸಿಗಳ ಹಿತ ರಕ್ಷಣಾ ಸಮಿತಿ ಸಂಚಾಲಕ ಬಿ.ಪಿ.ಮಂಜುನಾಥ್ (9844079165) ಅಥವಾ ಸದಸ್ಯ ಪ್ರಕಾಶ್ ಜೈನ್ (9845357577) ಅವರನ್ನು ಸಂಪರ್ಕಿಸಬಹುದು. ಈ ಮಧ್ಯೆ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ಸಮಸ್ಯೆಗೆ ಸಂಬಂಧಿಸಿದಂತೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

Translate »