ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ
ಮೈಸೂರು

ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ

August 11, 2018

ನಂಜನಗೂಡು: ಕೇರಳದ ವೈನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿ ಅಲ್ಲಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಪರಿಣಾಮ ಉಂಟಾದ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ನಲುಗಿ ಹೋಗಿದೆ.

ಅಪಾಯದ ಮಟ್ಟ ಮೀರಿ ಕಪಿಲೆ ಹರಿಯುತ್ತಿರುವುದರಿಂದ ಮೈಸೂರು-ನಂಜನಗೂಡು ಹಾಗೂ ಮೈಸೂರು-ಸುತ್ತೂರು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ಹೆದ್ದಾರಿ, ಪ್ರವಾಹದ ನೀರಿನಲ್ಲಿ ಮುಳುಗಿದೆ. ರಸ್ತೆ ಮೇಲೆ 2ರಿಂದ 3 ಅಡಿ ನೀರು ಹರಿಯು ತ್ತಿರುವ ಪರಿಣಾಮ ಈ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.

ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳು ತಾಂಡವಪುರ, ಕೆಂಪಿಸಿದ್ದನಹುಂಡಿ ಮತ್ತು ಬಸವನಪುರ ಮಾರ್ಗವಾಗಿ ನಂಜನಗೂಡು ತಲುಪುವಂತೆ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಅದೇ ರೀತಿ ನಂಜನಗೂಡಿ ನಿಂದ ಮೈಸೂರಿಗೆ ಬರುವ ವಾಹನಗಳು ಹುಲ್ಲಹಳ್ಳಿ ಸರ್ಕಲ್ನಲ್ಲಿ ತಿರುವು ಪಡೆದು ಹುಲ್ಲಹಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಬೇಕಾಗಿದೆ. ತಮಿಳುನಾಡು ಮತ್ತು ಕೇರಳಾಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.

ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ಹಾಗೂ ನಂಜನಗೂಡು ದೇವಾಲಯಕ್ಕೆ ತೆರಳುತ್ತಿದ್ದ ಭಕ್ತಾದಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಮತ್ತೊಂದೆಡೆ ಸುತ್ತೂರು ಸೇತುವೆ ಮುಳುಗಡೆಯಾಗಿರುವ ಪರಿಣಾಮ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮೈಸೂರು-ಸುತ್ತೂರು ಸಂಪರ್ಕ ಕಡಿತವಾಗಿದ್ದು, ಸುತ್ತೂರಿನಿಂದ ಮೈಸೂರಿಗೆ ಬರುವ ವಾಹನಗಳು ನಂಜನಗೂಡು ಅಥವಾ ತಾಯೂರು ಮಾರ್ಗವಾಗಿ ತಿ.ನರಸೀಪುರ ರಸ್ತೆ ತಲುಪಿ ಮೈಸೂರಿಗೆ ಬರಬೇಕಾಗಿದೆ.

ಸುಮಾರು 26 ವರ್ಷಗಳ ನಂತರ ಕಬಿನಿ ಜಲಾಶಯದಿಂದ ಈ ಪ್ರಮಾಣದ ನೀರನ್ನು ನದಿಗೆ ಹರಿಯಬಿಡಲಾಗಿದೆ. ಪ್ರವಾಹದಿಂದಾಗಿ ನಂಜನಗೂಡಿನ 16 ಕಾಲು ಮಂಟಪ ಸ್ನಾನ ಘಟ್ಟ ಅಯ್ಯಪ್ಪಸ್ವಾಮಿ ದೇವಸ್ಥಾನ, ಲಿಂಗಾಭಟ್ಟರ ಗುಡಿ, ಪರಶುರಾಮ ದೇವಸ್ಥಾನ, ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿವೆ. ನಂಜನಗೂಡು ಪಟ್ಟಣದ ತಗ್ಗು ಪ್ರದೇಶಗಳಾದ ಒಕ್ಕಲಗೇರಿ, ಸರಸ್ವತಿ ಕಾಲೋನಿ, ತೋಪಿನ ಬೀದಿಯ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ತಾಲೂಕಿನ ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು, ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ತಹಸೀಲ್ದಾರ್ ದಯಾನಂದ್, ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಹಾರ ಕಾರ್ಯಗಳನ್ನು ಸಮರೋಪಾದಿ ಕೈಗೊಳ್ಳಬೇಕೆಂದು ಸೂಚಿಸಿರುವ ಜಿಲ್ಲಾಧಿಕಾರಿಗಳು, ಯಾವುದೇ ಅಧಿಕಾರಿಗಳು ರಜೆ ಹಾಕಬಾರದು ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳಬಾರದು. ಪ್ರವಾಹ ಪರಿಹಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ನಂಜನಗೂಡು ದೇಗುಲದ ಕಲಾ ಮಂದಿರದ ಬಳಿ ಗಂಜಿ ಕೇಂದ್ರ ತೆರೆದು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗುತ್ತಿದೆ.

 

ನಂ.ಗೂಡಿಗೆ ಇಂದಿನಿಂದ ನೀರು ಸರಬರಾಜು ಸ್ಥಗಿತ

ನಂಜನಗೂಡು:  ತಾಲೂಕಿನ ದೇಬೂರು ಗ್ರಾಮದಲ್ಲಿರುವ ನಂಜನಗೂಡು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್‍ಹೌಸ್ ಜಲಾವೃತಗೊಂಡಿದ್ದು, ಅಲ್ಲಿನ ಟ್ರಾನ್ಸ್‍ಫಾರ್ಮರ್ ನೀರಿನಲ್ಲಿ ಮುಳುಗಿರುವ ಪರಿಣಾಮ ನಾಳೆ (ಆ. 11)ಯಿಂದ ನಂಜನಗೂಡು ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ನಗರಸಭೆ ಆಯುಕ್ತರಾದ ವಿಜಯ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಟ್ರಾನ್ಸ್‍ಫಾರ್ಮರ್ ನೀರಿನಲ್ಲಿ ಮುಳುಗಿರುವುದರಿಂದ ವಿದ್ಯುತ್ ಅಡಚಣೆ ಉಂಟಾಗಿದ್ದು, ಪಂಪ್ ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ನದಿಯಲ್ಲಿ ನೀರು ಕಡಿಮೆಯಾಗುವವರೆಗೂ ಟ್ರಾನ್ಸ್‍ಫಾರ್ಮರ್ ರಿಪೇರಿ ಮಾಡಲು ಸಾಧ್ಯವಾಗದ ಕಾರಣ, ಆವರೆವಿಗೂ ನಂಜನಗೂಡು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಗರದ ನಿವಾಸಿಗಳು ನೀರನ್ನು ಮಿತವ್ಯಯವಾಗಿ ಬಳಸುವಂತೆ ಅವರು ಮನವಿ ಮಾಡಿದ್ದಾರೆ.

Translate »