ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ‘ಹೆಲಿ ರೈಡ್’ ಆರಂಭ
ಮೈಸೂರು, ಮೈಸೂರು ದಸರಾ

ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ‘ಹೆಲಿ ರೈಡ್’ ಆರಂಭ

October 14, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸದವಕಾಶವನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು, 2399 ರೂ. ಪಾವತಿಸಿ ಲಲಿತಮಹಲ್ ಹೆಲಿಪ್ಯಾಡ್‍ನಿಂದ 10 ನಿಮಿಷಗಳ ಕಾಲ ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ಹಾಕಬಹುದು.

ಕಳೆದ ಕೆಲ ವರ್ಷದಿಂದ ದಸರಾ ಮಹೋತ್ಸವದಲ್ಲಿ ಹೆಲಿ ಕಾಪ್ಟರ್ ರೈಡ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಅ.19ರವರೆಗೆ ಎರಡು ಹೆಲಿಕಾಪ್ಟರ್ ಗಳು ಮೈಸೂರಿನ ಸೌಂದರ್ಯವನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ತೋರಿಸಲು ಸಿದ್ಧಗೊಂಡಿದ್ದು, ಒಬ್ಬರಿಗೆ 2399 ರೂ. ದರ ನಿಗದಿ ಮಾಡಲಾಗಿದೆ.

ಒಟ್ಟು 10 ನಿಮಿಷಗಳ ಅವಧಿಯಲ್ಲಿ ಟೇಕ್ ಆಫ್ ಮತ್ತು ಲ್ಯಾಂಡ್ ಆಗಲು ತಲಾ ಒಂದು ನಿಮಿಷದ ಅವಧಿ ಬೇಕಾಗಿದ್ದು, 8 ನಿಮಿಷದಲ್ಲಿ ಲಲಿತಮಹಲ್ ಪ್ಯಾಲೇಸ್, ಚಾಮುಂಡಿ ಬೆಟ್ಟ, ಅರಮನೆ, ಮೈಸೂರು ವಿವಿ, ಕುಕ್ಕರಹಳ್ಳಿಕೆರೆ, ಕಾರಂಜಿಕೆರೆ, ಚಾಮುಂಡಿವಿಹಾರ ಕ್ರೀಡಾಂಗಣ, ದೂರದಿಂದ ಕೆಆರ್‍ಎಸ್ ಹಿನ್ನೀರು ಹಾಗೂ ಇನ್ನಿತರ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇಂದು ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಸಿರು ನಿಶಾನೆ ನೀಡುವುದರೊಂದಿಗೆ ತಾವೂ ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸಿದರು. ಸಚಿವ ಜಿಟಿಡಿ ಅವರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ, ಪುತ್ರ ಜಿ.ಡಿ.ಹರೀಶ್‍ಗೌಡ ಹಾಗೂ ಸೊಸೆ, ಮೊಮ್ಮಕ್ಕಳೊಂದಿಗೆ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್ ಮಾಡುವ ಮೂಲಕ ಆಗಸದಿಂದ ಮೈಸೂರಿನ ಸೌಂದರ್ಯ ಸವಿದರು.

ಇದೇ ವೇಳೆ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ದಸರಾ ಸಂದರ್ಭದಲ್ಲಿ ಪ್ರತಿ ವರ್ಷವೂ ಹೆಲಿಕಾಪ್ಟರ್ ಜಾಲಿ ರೈಡ್ ಆಯೋಜಿಸಲಾಗುತ್ತಿದೆ. ಈ ಬಾರಿಯೂ ದಸರಾ ಮಹೋತ್ಸವವನ್ನು ಹೆಚ್ಚು ಆಕರ್ಷಣೀಯವಾಗಿಸಲು ಹೆಲಿರೈಡ್‍ಗೆ ಚಾಲನೆ ನೀಡಲಾಗಿದೆ. ಆಗಸದಿಂದ ಅರಮನೆ, ಚಾಮುಂಡಿಬೆಟ್ಟ, ಪ್ರಕೃತಿ ಸೊಬಗು ಸವಿಯಲು ಇದು ಉತ್ತಮ ಅವಕಾಶವಾಗಿದ್ದು, ಸಾರ್ವಜನಿಕರು ಇದರ ಸದುಪ ಯೋಗಪಡೆದುಕೊಳ್ಳವೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಮಾತನಾಡಿ, ಹೆಲಿಕಾಪ್ಟರ್‌ನಲ್ಲಿ  ಒಮ್ಮೆಯಾದರೂ ಹಾರಾಟ ನಡೆಸಬೇಕು ಎಂಬ ಮಧ್ಯಮ ವರ್ಗದ ಕನಸನ್ನು ಹೆಲಿ ರೈಡ್ ನನಸು ಮಾಡಲಿದೆ. ದರ ನಿಗದಿ ಸೇರಿದಂತೆ ಇನ್ನಿತರ ಕೆಲ ಗೊಂದಲಗಳಿಂದ ಹೆಲಿ ರೈಡ್ ತಡವಾಗಿ ಚಾಲನೆಗೊಂಡಿದೆ. ದಸರಾ ಸೇರಿದಂತೆ ಪ್ರವಾ ಸೋದ್ಯಮ ಉತ್ತೇಜನಕ್ಕಾಗಿ ಆರಂಭಿಸಿರುವ ಆಕಾಶ್ ಅಂಬಾರಿಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು 700 ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಓಪನ್ ಬಸ್‍ಗೆ 4 ದಿನಗಳವರೆಗೆ ಟಿಕೆಟ್ ಬುಕ್ ಆಗಿದೆ. ಹೆಲಿ ರೈಡ್‍ಅನ್ನು ದಸರಾ ಮುಗಿಯುವವರೆಗೂ ಆಯೋಜಿಸಿದ್ದು, ಬೇಡಿಕೆ ಬಂದರೆ ಮುಂದುವರೆಸುವುದಕ್ಕೆ ಪರಿಶೀಲಿಸುವುದಾಗಿ ಹೇಳಿದರು.

Translate »